ಭಟ್ಕಳ: ಇದೀಗ ಎಲ್ಲೆಡೆಯಲ್ಲಿಯೂ ಗ್ರಾಮ ಪಂಚಾಯತ ಚುನಾವಣೆಯ ಕಾವು, ಒಂದೊಂದು ಕಡೆಗಳಲ್ಲಿ ಒಂದೊಂದು ವಿಶೇಷತೆ, ಭಟ್ಕಳ ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ಈ ದಿಸೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದು ದೇಶದ ಗಡಿ ಕಾಯ್ದ ಯೋಧನೀಗ ನಿವೃತ್ತಗೊಂಡು ಪಂಚಾಯತ್ ಪೈಟ್ ನಲ್ಲಿ ಭಾಗವಹಿಸಿದ್ದಾರೆ.
1994ರಲ್ಲಿ ಗಡಿ ಭದ್ರತಾ ಪಡೆಯಲ್ಲಿ ಸೇರಿಕೊಂಡು ಪಂಜಾಬ್, ಪಾಕಿಸ್ತಾನ ಗಡಿ, ಕಾಶ್ಮೀರ, ಪಂ.ಬಂಗಾಲ, ಮೇಘಾಲಯ ಗಡಿಗಳಲ್ಲಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದು 2014 ರಿಂದ 2017 ರ ವರೆಗೆ ಭಾರತ ಪಾಕ್ ಗಡಿಯಾಗಿರುವ ವಾಘಾ ಗಡಿಯಲ್ಲಿ ಬಾಂಬ್ ಸ್ಕ್ವಾಡ್ ಕಮಾಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ, ದೇಶದ ವಾಘಾ ಗಡಿಯಲ್ಲಿ ಬಾಂಬ್ ಸ್ಕ್ವಾಡ್ ಕಮಾಂಡರನಾಗಿದ್ದ ಯಲ್ವಡಿಕವೂರು ಪಂಚಯತ್ ವ್ಯಾಪ್ತಿಯ ಹಡೀನ್ ನಿವಾಸಿ ಅಚ್ಯುತ್ ನಾಗಪ್ಪ ನಾಯ್ಕ ಇದೀಗ ಚುನಾವಣಾ ಕಣದಲ್ಲಿ ಇದ್ದಾರೆ.
ನಿವೃತ್ತಿ ನಂತರ ತನ್ನ ಹಳ್ಳಿ ಸೇರಿಕೊಂಡು ಎರಡು ಮಕ್ಕಳು ಹಾಗೂ ಪತ್ನಿಯೊಂದಿಗೆ ತನ್ನ ಎರಡು ಎಕರೆ ಜಮೀನಿನಲ್ಲಿ ಕೃಷಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಈಗ ನಡೆಯುತ್ತಿರುವ ಪಂಚಾಯತ್ ಚುನಾವಣೆಯ ಮೂಲಕ ಗ್ರಾಮದ ಅಭಿವೃದ್ಧಿಯ ಕನಸನ್ನು ಕಾಣುತ್ತಿರುವ ಇವರು ಚುನಾವಣೆಗೆ ಸ್ಪರ್ಧಿಸುವುದರ ಮೂಲಕ ತಮ್ಮ ರಾಜಕೀಯ ಭವಿಷ್ಯಕ್ಕೆ ಬುನಾದಿಯನ್ನು ಹಾಕಿದ್ದಾರೆ.
22 ವರ್ಷಗಳ ಕಾಲ ದೇಶದ ಗಡಿ ಕಾಯುವುದರ ಮೂಲಕ ಸೇವೆಗೈದಿದ್ದು ಈಗ ನನ್ನ ಹಳ್ಳಿಯ ಅಭಿವೃದ್ಧಿಗಾಗಿ, ಜನ ಸಾಮಾನ್ಯರ ಸೇವೆಗಾಗಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಅವರು ಸತ್ವಾಧಾರ ನ್ಯೂಸ್ ಗೆ ತಿಳಿಸಿದ್ದಾರೆ.