“ಅಭಯಾಕ್ಷರ”ಕ್ಕೆ ಯತಿಶ್ರೇಷ್ಠರು, ಸಂತರುಗಳು, ಸಾಧುಗಳು ಮತ್ತು ಜನಸಾಮಾನ್ಯರು ಬೆಂಬಲ ಸೂಚಿಸಿ ತಮ್ಮ ಹಕ್ಕೊತ್ತಾಯ ಸಲ್ಲಿಸುತ್ತಿರುವದು ಎಲ್ಲರಿಗೂ ತಿಳಿದ ವಿಷಯ.
ಹಲವು ಸಂತ ಶ್ರೇಷ್ಟರು ಅಭಯಾಕ್ಷರಕ್ಕೆ ಸಹಿ ನೀಡುವ ಮೂಲಕ ಸಮಾಜಕ್ಕೆ ಮತ್ತು ಸರಕಾರಕ್ಕೆ ಗೋರಕ್ಷಣೆಯ ಕುರಿತು ಸಂದೇಶ ನೀಡಿದರು.
ಉತ್ತರಕನ್ನಡ ಜಿಲ್ಲೆಯ ವಿಚಾರದಲ್ಲಿ ಹೇಳುವದಿದ್ದರೆ ಯತಿಶ್ರೇಷ್ಠರಾದ ಸ್ವರ್ಣವಲ್ಲಿ ಶ್ರೀಗಳು ಸಹಿ ನೀಡಿ ಹರಸಿದ ನಂತರ ಅಂಕೋಲಾದಲ್ಲಿ ತಮ್ಮ ೩೨ನೇ ಚಾತುರ್ಮಾಸ ವ್ರತದಲ್ಲಿ ನಿರತರಾದ ಮತ್ತೊಬ್ಬ ಯತಿಶ್ರೇಷ್ಠರೂ ದೈವಜ್ಞ ಪೀಠಾಧೀಶರೂ ಆದ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ ಅಭಯಾಕ್ಷರ ಪಡೆಯುವ ಸುಯೋಗ ಉತ್ತರಕನ್ನಡ ಗೋಪರಿವಾರ ಮತ್ತು ಅಂಕೋಲಾ ಗೋಪರಿವಾರಕ್ಕೆ ಒದಗಿಬಂದಿತು.
ಅತೀ ಪ್ರೀತಿಯಿಂದ ಸಹಿ ನೀಡಿದ ಶ್ರೀಗಳು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನ ಯಶಸ್ವಿಯಾಗಲಿ ಎಂದು ಸಂದೇಶ ನೀಡಿ ನಮ್ಮನ್ನು ಹರಸಿದರು.
ಅಂಕೋಲಾ ತಾಲೂಕಾ ಅಭಯಾಕ್ಷರ ಅಭಿಯಾನವೂ ಶ್ರೀಗಳ ಕರಕಮಲಗಳಿಂದ ಚಾಲನೆಗೊಂಡಿತು.