ಭಟ್ಕಳ: ತಾಲೂಕಿನ ಪುರವರ್ಗ ಗಣೇಶ ನಗರದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ವರದಿಯಾಗಿದೆ. ಚಾಲಕ ಆಕ್ಟಿವ್ ಸ್ಕೂಟಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಬುಧವಾರದಂದು ಸಂಜೆ ನಡೆದಿದೆ.
ಅದ್ರಷ್ಟವಶಾತ್ ಟ್ಯಾಂಕರ್ ಖಾಲಿ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲದಿರುವುದು ಜನರಿಗೆ ಸಮಾಧಾನಕರವಾಗಿದ್ದರು ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಹಿನ್ನೆಲೆ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.
ಹುಬ್ಬಳ್ಳಿ ದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಹಿಂದುಸ್ಥಾನ ಪೆಟ್ರೋಲಿಯಂ ಟ್ಯಾಂಕರ್ ನ ಚಾಲಕ ತನ್ನ ಎದುರಿಗೆ ಶಿರೂರಿನಿಂದ ಮಂಕಿ ಕಡೆಗೆ ತೆರಳುತ್ತಿದ್ದ ಹೋಂಡಾ ಆಕ್ಟಿವ್ ಸ್ಕೂಟಿಯನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಗ್ಯಾಸ್ ಟ್ಯಾಂಕರ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಪಲ್ಟಿಯಾಗಿದೆ.
ಖಾಲಿ ಗ್ಯಾಸ್ ಟ್ಯಾಂಕರ್ ಅಪಘಾತದಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕ ಮಂಜುನಾಥ ತಲೆಗೆ ಬಲವಾದ ಪೆಟ್ಟು ಬಿದ್ದು ಗಂಭೀರ ಗಾಯಗೊಂಡ ಹಿನ್ನೆಲೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಅತ್ತ ಆಕ್ಟಿವ್ ಸ್ಕೂಟಿನಲ್ಲಿದ್ದ ಇಬ್ಬರು ಸವಾರರು ಸ್ಕೂಟಿ ಸಮೇತ ಟ್ಯಾಂಕರ ಎದುರಿಗೆ ಪಲ್ಟಿಯಾಗಿ ಬಿದ್ದಿದ್ದಾರೆ. ಬೈಕ ಸವಾರ ಸಮ್ಮುನ್ ಇಮ್ತಿಯಾಜ್ ಬೈಲೂರಕರ್ ಗಾಯಗೊಂಡಿದ್ದು, ತಾಯಿ ಖಾತುನ್ ಇಮ್ತಿಯಾಜ್ ಬೈಲೂರಕರ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆಯ ಸುದ್ದಿ ಸುತ್ತಲೂ ಹರಿದಾಡಿ ಕೆಲಕಾಲ ಜನ ಗೊಂದಲಕ್ಕೆ ಒಳಗಾದರು, ಪೊಲೀಸ್ ಹಾಗೂ ಅಧಿಕಾರಿಗಳು ಹಾಜರಿದ್ದು ಮುಂದಿನ ಕಾರ್ಯ ಕೈಗೊಂಡಿದ್ದಾರೆ.