ಕಾರವಾರ : ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರವಾರ ಜಿಲ್ಲಾ ಘಟಕದ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಉತ್ತರ ಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನದ ಅಧ್ಯಕ್ಷರಾದ ಮುರಳೀಧರ ಪ್ರಭುರವರ ನೇತೃತ್ವದಲ್ಲಿ ಗೀತಾ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾದ ವಿದೂಷಿ ಶ್ರೀದೇವಿ ಸುರೇಶ ಭಟ್ ರವರು ಮಾತನಾಡಿ, ಜೀವನದಲ್ಲಿ ನೊಂದ ಮನಸ್ಸುಗಳಿಗೆ ಚೈತನ್ಯ ನೀಡುವ ಶಕ್ತಿ ಇರುವುದು ಭಗವದ್ಗೀತೆಗೆ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಸತ್ಸಂಕಲ್ಪದಿಂದ ನಡೆಯುತ್ತಿರುವ ಅಭಿಯಾನವು ನಮಗೆ ವ್ಯಕ್ತಿತ್ವ ವಿಕಸನಕ್ಕೆ ಬುನಾದಿ ಹಾಕಿಕೊಟ್ಟಿದೆ ಎಂದರು. ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆ, ನೈತಿಕತೆಗೆ ಇಂತಹ ಕಾರ್ಯಗಳು ಕಾರಣವಾಗುವುದು ಎಂದ ಅವರು, ವಾಲ್ಮೀಕಿಯ ಉದಾಹರಣೆಯೊಂದಿಗೆ ಬೇಡನೊಬ್ಬ ಮಹಾಕವಿಯಾದ ಪ್ರಸಂಗವನ್ನು ಮಾರ್ಮಿಕವಾಗಿ ತಿಳಿಸಿ ಜೀವನದ ಬದಲಾವಣೆಯ ಗತಿಯನ್ನು ದೃಷ್ಟಾಂತದ ಮೂಲಕ ಮನೋಜ್ಞವಾಗಿ ತಿಳಿಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಮುರಳೀಧರ ಪ್ರಭುರವರು, ಭಗವದ್ಗೀತಾ ಅಭಿಯಾನದ ಉದ್ದೇಶ ಮಹತ್ವದ ಕುರಿತು ತಿಳಿಸುತ್ತಾ ಧರ್ಮದ ಚೌಕಟ್ಟಿನಲ್ಲಿ ಇರುವ ಆಸೆ ಕಾಮನೆಗಳನ್ನು ಅನುಭವಿಸಲು ಯಾವುದೇ ತೊಂದರೆ ಇಲ್ಲ, ಆದರೆ ಅಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಅದೇ ಬಂಧನವಾಗುತ್ತದೆ ಎಂದು ಸಂದರ್ಭೋಚಿತವಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಸ್ವೀಕಾರ ಕೇಂದ್ರದ ಉಪನಿರ್ದೇಶಕಿ ಶ್ರೀಮತಿ ಪದ್ಮಾವತಿ ಜಿ. ಅವರು ಕೇಂದ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣವಾಗಿದೆ ಇಲ್ಲಿರುವ ಮಹಿಳೆಯರಲ್ಲಿ ಮತ್ತು ಬಾಲಕಿಯರಲ್ಲಿ ಸಂಸ್ಕಾರ ವರ್ಧನೆಗೆ ಕಾರಣವಾಗಲಿದೆ ಎಂದು ಆಶಿಸಿದರು. ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿ ಕೊಡಬೇಕೆಂದು ವಿನಂತಿಸಿದರು.
ಕಾರವಾರ ತಾಲೂಕಿನ ಕಾರ್ಯಕರ್ತೆ ಪದ್ಮಜಾ ಜೋಯಿಸ್ ಅವರು ಸುಶ್ರಾವ್ಯವಾಗಿ ಗೀತಾ ಪಠಣ ಪಾಠ ನಡೆಸಿಕೊಟ್ಟರು. ಕುಮಟಾದ ಗೀತಾ ಅಭಿಯಾನದ ಕಾರ್ಯಕರ್ತೆ ಶ್ರೀಮತಿ ಜಯಾ ಶಾನಭಾಗ ಅವರು ಧನ್ಯವಾದ ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಯುವತಿಯರು ಮಾತೆಯರು ಸೇರಿ ಸುಮಾರು 35ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಭಾಗವಹಿಸಿದವರಿಗೆ ಗೀತಾ ಪುಸ್ತಕ ಹಾಗೂ ಪ್ರಸಾದರೂಪದಲ್ಲಿ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.