ಕುಮಟಾ ಪಟ್ಟಣದ ರಾ.ರಾ.ಅಣ್ಣಾ ಪೈ ಸಭಾಭವನದಲ್ಲಿ ಅಧ್ಯಕ್ಷೆ ಮೋಹಿನಿ ಗೌಡ ಅಧ್ಯಕ್ಷತೆಯಲ್ಲಿ ಬುಧವಾರ ವಿಶೇಷ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಿತು.

ಪುರಸಭೆ ನಿಧಿ, ಉದ್ದಿಮೆ, ನೀರಿನ ಶುಲ್ಕ ನಿಧಿ ಹಾಗೂ ವಿವಿಧ ಯೋಜನೆಗಳಲ್ಲಿ ಕರೆದ ಟೆಂಡರ್‌ಗಳಿಗೆ ಅನುಮೋದನೆ ನೀಡಲಾಯಿತು. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಐಇಸಿ ಚಟುವಟಿಕೆಗಳಿಗಾಗಿ ಪುರಸಭೆ ನಿಗದಿಪಡಿಸಿದ 5 ಲಕ್ಷ ರೂ. ಕ್ರಿಯಾಯೋಜನೆ ಸಿದ್ಧಪಡಿಸಲಾಯಿತು. ಕಿತ್ತೂರ ಚೆನ್ನಮ್ಮ ಉದ್ಯಾನವನ, ಸಹಾಯಕ ಆಯುಕ್ತರ ಕಚೇರಿ ಪಕ್ಕದಲ್ಲಿರುವ ಉದ್ಯಾನವನ ಸ್ವಚ್ಛತಾ ನಿರ್ವಹಣೆಯ ಕುರಿತು ಟೆಂಡರ್ ಕರೆಯುವ ಕುರಿತು ಚರ್ಚೆ ನಡೆಯಿತು.

ಪುರಸಭೆಗೆ ಸೇರಿದ 65 ಅಂಗಡಿಕಾರರು ಪುರಸಭೆಗೆ ಬಾಡಿಗೆ ಹಣ ನೀಡದೇ ಹಾಗೂ ಅಂಗಡಿಯನ್ನೂ ಬಿಟ್ಟುಕೊಡದಿರುವ ಕುರಿತು ಧಾರವಾಡದ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಮುಂದುವರೆಸಲು ಶುಲ್ಕ ಸಂದಾಯ ಮಾಡುವ ಕುರಿತು ವಕೀಲರು ಪತ್ರ ಬರೆದಿದ್ದಾರೆ. ಅವರಿಗೆ ಹಣ ನೀಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ.ಕೆ.ತಿಳಿಸಿ ವಿಷಯವನ್ನು ಪ್ರಸ್ತಾಪಿಸಿದರು. ಪುರಸಭೆಗೆ ಸೇರಿದ 65 ಅಂಗಡಿಗಳ ಹಕ್ಕನ್ನು ಪುರಸಭೆಗೆ ನೀಡಿದೆ. ಆದರೆ ಬಾಡಿಗೆ ಹಣ ಇದುವರೆಗೂ ಬಂದಿಲ್ಲ. ಅಲ್ಲದೇ, 15 ಅಂಗಡಿಗಳ ವಿಚಾರಣೆ ಬಾಕಿಯಿದ್ದು, ಕೆಲ ದಿನಗಳಲ್ಲಿ ಪ್ರಕರಣ ವಿಚಾರಣೆಗೆ ಬರುತ್ತದೆ. ಒಂದೊಂದು ಪ್ರಕರಣಗಳಿಗೆ 10 ಸಾವಿರ ಖರ್ಚು ತಗುಲುತ್ತದೆ. ಶುಲ್ಕವನ್ನು ಆದಷ್ಟು ಶೀಘ್ರದಲ್ಲಿ ಜಮಾ ಮಾಡಬೇಕು ಎಂದು ಹೈಕೋರ್ಟ್ ವಕೀಲರು ಪತ್ರ ಕಳುಹಿಸಿದ್ದಾರೆ. ಒಂದೊಂದು ಪ್ರಕರಣಗಳಿಗೆ 10 ಸಾವಿರ ನೀಡಿದರೆ, ಒಟ್ಟೂ 6.5 ಲಕ್ಷ ರೂ. ಸಂದಾಯ ಮಾಡಬೇಕಾಗುತ್ತದೆ. ಇದು ಪುರಸಭೆಗೆ ಹೊರೆಯಾಗುತ್ತದೆ ಎಂಬ ವಿಷಯ ಚರ್ಚೆಯಾಯಿತು.
ಉಪಾಧ್ಯಕ್ಷ ರಾಜೇಶ ಪೈ ಪ್ರತಿಕ್ರಿಯಿಸಿ,ಅಧ್ಯಕ್ಷರು ಹಾಗೂ ಪುರಸಭಾ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ಒಂದು ಪ್ರಕರಣಕ್ಕೆ 1 ಸಾವಿರದಂತೆ ಒಟ್ಟೂ 65 ಸಾವಿರ ಶುಲ್ಕ ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದರು.

RELATED ARTICLES  ಅಂಕೋಲಾದಲ್ಲಿ ಭೀಕರ ಅಪಘಾತ : ಮಹಿಳೆಯೊರ್ವಳ ದುರ್ಮರಣ

ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ ಹಾಗೂ ಪುರಸಭೆಗೆ ಸೇರಿದ ಅಂಗಡಿಯಾದ್ದರಿಂದ ಪ್ರಕರಣ ನಡೆಸಲು ವಕೀಲರಿಗೆ ಶುಲ್ಕ ನೀಡಲು ಸರ್ವ ಸದಸ್ಯರು ಒಪ್ಪಿಗೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ಎಂ.ಟಿ.ನಾಯ್ಕ, ಸುಮತಿ ಭಟ್ಟ, ಛಾಯಾ ವೆಂಗ್ಯುರ್ಲೆಕರ್, ಸುಶೀಲಾ ನಾಯ್ಕ, ಅನುರಾಧಾ ಬಾಳೇರಿ, ಶೈಲಾ ಗೌಡ, ಪಲ್ಲವಿ ಮಡಿವಾಳ, ತುಳುಸು ಗೌಡ, ಸೂರ್ಯಕಾಂತ ಗೌಡ, ಅನಿಲ ಹರ್ಮಲಕರ್, ಟೋನಿ ರೋಡ್ರಿಗಿಸ್, ಲಕ್ಷ್ಮೀ ಗೊಂಡ, ಲಕ್ಷ್ಮೀ ಚಂದಾವರ, ಗೀತಾ ಮುಕ್ರಿ, ಅಭಿ ನಾಯ್ಕ ಸೇರಿದಂತೆ ಪುರಸಭಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES  ಚರಂಡಿಗೆ ಬಿದ್ದ ಹಸುವಿನ ರಕ್ಷಣೆ