ಕುಮಟಾ: ಪಟ್ಟಣದ ಉಪ್ಪಿನಗಣಪತಿಯ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಸನ್ನಿಧಾನದಲ್ಲಿ ಪ್ರತೀವರ್ಷದಂತೆ ಹಲವಾರು ಮಾಲಾಧಾರಿ ಸ್ವಾಮಿಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪ್ರತಿ ವರ್ಷವೂ ಡಿ.24 ರಿಂದ ಸಂಪ್ರದಾಯದಿಂದ ನಡೆಸಿಕೊಂಡು ಬರುತ್ತಿದ್ದ ಹಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಬಾರಿಯ ಕೊರೊನಾದಿಂದ ಕೊಂಚ ತಡೆಯಾಗಿದೆ. ಆದರೂ ಡಿ. 24ರ ಬೆಳಿಗಿನ ಜಾವ 5 ಗಂಟೆಗೆ ಧ್ವಜಾ ಪೂಜೆಯೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ 11 ಗಂಟೆಗೆ ಗಣಹೋಮ, ಸಂಜೆ 6 ಗಂಟೆಗೆ ಸನ್ನಿಧಿಯಿಂದ 100 ಮೀ. ದೂರದಲ್ಲಿರುವ ಉಪ್ಪಿನಗಣಪತಿ ದೇವಾಲಯದ ಪ್ರದಕ್ಷಿಣೆಯ ಬಳಿಕ ದೇವಾಲಯದ ಆವರಣದಲ್ಲಿ ಭಕ್ತಾದಿಗಳಿಗೆ ಸಾಮಾಜಿಕ ಅಂತರದಲ್ಲಿ ಪೂಜೆಗೆ ಅನುವು ಮಾಡಿಕೊಡಲಾಯಿತು.
ನಂತರ ಸನ್ನಿಧಿಗೆ ಮರಳಿ ಸನ್ನಿಧಾನದಲ್ಲಿ ನಯ್ಯಭಿಷೇಕ ಪೂಜೆಯನ್ನು ನೆರವೇರಿಸಲಾಯಿತು. ಸನ್ನಿಧಾನವನ್ನು 38 ವರ್ಷಗಳ ಹಿಂದೆ ಸ್ಥಾಪಿಸಿ, ಮುನ್ನಡೆಸಿಕೊಂಡು ಬರುತ್ತಿರುವ 53ನೇ ವರ್ಷದ ಶಬರಿಮಲೆ ಅಯ್ಯಪ್ಪನ ಮಾಲಾಧಾರಿಗಳಾದ ಶ್ರೀ ಕುಮಾರ ಗುರುಸ್ವಾಮಿಯವರು ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಹಲವು ವರ್ಷಗಳ ಮಾಲಾಧಾರಿಗಳಾದ ಕೇಶವ ಗೌಡ, ಸತೀಶ ಗೌಡ, ಜನಾರ್ದನ ಗೌಡ, ಶ್ರೀಧರ ಮಾಸ್ತರ, ಎನ್.ಬಿ.ನಾಯ್ಕ, ಚಂದ್ರಕಾಂತ ನಾಯ್ಕ, ಮಾದೇವ ಗೌಡ, ದರ್ಶನ ನಾಯ್ಕ ಸೇರಿದಂತೆ ಸನ್ನಿಧಾನದ ಹಲವು ಮಾಲಾಧಾರಿಗಳು ಭಾಗಿಯಾಗಿದ್ದರು.
ಈ ವರ್ಷ ಕೋವಿಡ್-19 ಮಹಾಮಾರಿ ರೋಗದ ಕಾರಣ ಸರಳವಾಗಿ ಸನ್ನಿಧಾನದ ಮಾಲಾಧಾರಿಗಳಷ್ಟೇ ಭಾಗಿಯಾಗಿ ಪೂಜಾ ಕಾರ್ಯಕ್ರಮವನ್ನು ನಡೆಸಿದ್ದೇವೆ. ಅಗ್ನಿಪ್ರವೇಶ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೇವೆ. ಮೂರ್ತಿ ದರ್ಶನಕ್ಕೆ ಭಕ್ತರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ. ಕಾರ್ಯಕ್ರಮಕ್ಕೆ ಶ್ರೀ ರೋಜಗುರುಸ್ವಾಮಿ ಶಿವಮೊಗ್ಗ ಮತ್ತು ಅಭಿಷೇಕ ನಾಯಕ ತಲಗೇರಿಯವರು ಶುಭಾಶಯ ತಿಳಿಸಿರುತ್ತಾರೆ.