ಶಿರಸಿ: ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ ಕಾರ್ತಿಕ ಉತ್ಸವವು ಡಿಸೆಂಬರ್ 29 ರಿಂದ ಜನವರಿ 1ರ ವರೆಗೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ತಿಕ ಉತ್ಸವವನ್ನು ಸರಕಾರದ ಆದೇಶದಂತೆ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದಂತೆ ಕೀರ್ತನೆ,ಸಾಂಸ್ಕೃತಿಕ ಕಾರ್ಯಕ್ರಮ,ಕೋಲಾಟ, ಡೊಳ್ಳು ಕುಣಿತ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿರುತ್ತದೆ.
ಮಂಗಳವಾರದ “ದೀಪೋತ್ಸವ”ದಂದು ಶ್ರೀದೇವಿಯ ಪಲ್ಲಕ್ಕಿಯು ರಾತ್ರಿ 8 ಗಂಟೆಗೆ ದೇವಾಲಯದಿಂದ ಹೊರಟು ಜಾತ್ರಾ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿ ಪಲ್ಲಕ್ಕಿಯು ಶ್ರೀ ದೇವಸ್ಥಾನಕ್ಕೆ ಮರಳಿ ಬರುತ್ತದೆ. ತದನಂತರ ರಾತ್ರಿ 10 ಘಂಟೆಗೆ ಮಹಾಮಂಗಳಾರತಿಯೊಡನೆ ಪ್ರಸಾದ ವಿತರಣೆ ನಡೆಸಿ ಶ್ರೀ ದೇವಾಲಯವನ್ನು ಬಂದ್ ಮಾಡಲಾಗುವುದು. ಅದೇ ರೀತಿ ಜನವರಿ 1 ರಂದು ರಾತ್ರಿ 9 ಗಂಟೆಗೆ ದೀಪೋತ್ಸವ ಹಾಗೂ ರಾತ್ರಿ 10 ಗಂಟೆಗೆ ಮಹಾಮಂಗಳಾರತಿ ನೇರವೇರುವುದು.ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಮಾಡಿ ಶ್ರೀ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ ಎಂದು ಶ್ರೀ ದೇವಾಲಯದ ಧರ್ಮದರ್ಶಿಗಳಾದ ಡಾ ವೆಂಕಟೇಶ ನಾಯ್ಕ್ ಮಾಹಿತಿ ನೀಡಿದ್ದು, ಭಕ್ತರು ಸಹಕರಿಸುವಂತೆ ಕೋರಿದ್ದಾರೆ.