ಕಾರವಾರ : ಏಳು ತಾಲೂಕುಗಳಲ್ಲಿ ಭಾನುವಾರ ನಡೆದ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು ೩,೧೯,೭೪೨ ಮಂದಿ ಮತದಾನದ ಹಕ್ಕು ಚಲಾಯಿಸಿದ್ದು, ಶೇ. ೮೧.೪೧ ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ
ಡಾ. ಹರೀಶಕುಮಾರ ಕೆ. ಆವರು ಅಧಿಕೃತವಾಗಿ ತಿಳಿಸಿದ್ದಾರೆ.
ಹಳಿಯಾಳ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ. ೮೪.೬೪ ರಷ್ಟು ಮತದಾನವಾಗಿದ್ದು, ಮುಂಡಗೋಡದಲ್ಲಿ ಶೇ. ೮೩.೯೯ರಷ್ಟು ಮತದಾನ ದಾಖಲಾಗಿದೆ.
ಇನ್ನುಳಿದಂತೆ ಸಿದ್ದಾಪುರ ಶೇ. ೮೨.೨೦ರಷ್ಟು, ಶಿರಸಿ ಶೇ. ೮೧.೦೦ರಷ್ಟು, ಯಲ್ಲಾಪುರ ಶೇ. ೮೦.೮೭ರಷ್ಟು, ಜೋಯಿಡಾ ಶೇ. ೭೬.೩೨ರಷ್ಟು ಹಾಗೂ ದಾಂಡೇಲಿ ಶೇ. ೭೫.೨೩ರಷ್ಟು ಮತದಾನ ಆಗಿದೆ.
ಜಿಲ್ಲೆಯ ಈ ಏಳು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆ ೭ ರಿಂದಲೇ ಶಾಂತಿಯುತ ಹಾಗೂ ಉತ್ಸಾಹದಿಂದ ಮತದಾನ ನಡೆದಿದ್ದು, ಹಂತ ಹಂತವಾಗಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿದರು. ೯ ಗಂಟೆ ಹೊತ್ತಿಗೆ ಶೇ. ೧೦.೨೬ರಷ್ಟು, ೧೧ ಗಂಟೆ ಹೊತ್ತಿಗೆ ಶೇ. ೨೫.೨೪ರಷ್ಟು, ಮಧ್ಯಾಹ್ನ ೧ ಗಂಟೆಗೆ ಶೇ. ೪೫.೦೫ರಷ್ಟು, ೩ ಗಂಟೆಗೆ ಶೇ. ೬೦.೬೫ರಷ್ಟು ಮತ್ತು ಸಂಜೆ ೫ ಗಂಟೆಯ ಅಂತಿಮ ಹಂತದ ವೇಳೆಗೆ ಶೇ. ೮೧.೪೧ ರಷ್ಟು ಮತದಾನವಾಗಿದೆ.
ಜಿಲ್ಲೆಯ ೭ ತಾಲೂಕುಗಳಲ್ಲಿ ೨,೦೦೬೪೧ ಪುರುಷರು, ೧,೯೨,೧೩೪ ಮಹಿಳೆಯರು ಹಾಗೂ ಇತರೆ ೪ ಸೇರಿದಂತೆ ಒಟ್ಟು ೩,೯೨,೭೭೯ ಮತದಾರರಿದ್ದಾರೆ. ಡಿಸೆಂಬರ್ ೨೭ರ ಭಾನುವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಈ ೭ ತಾಲೂಕುಗಳಲ್ಲಿ ಅಂದರೆ ಜಿಲ್ಲೆಯ ಶಿರಸಿ ೪೧,೮೨೭ ಪುರುಷರು, ೩೮,೫೭೨ ಮಹಿಳೆಯರು ಸೇರಿ ೮೦,೩೯೯ ಜನ ಮತ ಚಲಾಯಿಸಿದ್ದಾರೆ. ಅದರಂತೆ ಸಿದ್ದಾಪುರ ೩೦,೧೪೪ ಪುರುಷರು, ೨೮,೭೦೫ ಮಹಿಳೆಯರು ಹಾಗೂ ಇತರೆ ೧ ಸೇರಿ ೫೮,೮೫೦, ಯಲ್ಲಾಪುರ ೨೦,೫೫೫ ಪುರುಷರು, ೧೯,೪೬೫ ಮಹಿಳೆಯರು ಸೇರಿ ೪೦,೦೨೦, ಮುಂಡಗೋಡ ೨೪,೯೩೮ ಪುರುಷರು, ೨೨,೯೦೩ ಮಹಿಳೆಯರು ಸೇರಿ ೪೭,೮೪೧, ಹಳಿಯಾಳ ೨೮,೭೮೦ ಪುರುಷರು, ೨೬,೪೬೯ ಮಹಿಳೆಯರು ಹಾಗೂ ಇತರೆ ೧ ಸೇರಿ ೫೫,೨೫೦, ದಾಂಡೇಲಿ ೩,೭೨೭ ಪುರುಷರು, ೩,೮೩೧ ಮಹಿಳೆಯರು ಸೇರಿ ೭,೫೫೮ ಹಾಗೂ ಜೋಯಿಡಾ ೧೫,೧೭೬ ಪುರುಷರು, ೧೪,೬೪೮ ಮಹಿಳೆಯರು ಸೇರಿ ೨೯,೮೨೪ ಮತದಾರರು ಮತ ಚಲಾಯಿಸುವ ಮೂಲಕ ೭ ತಾಲೂಕುಗಳಲ್ಲಿ ಒಟ್ಟಾರೆಯಾಗಿ ೩,೧೯,೭೪೨ ಮಂದಿ ಮತದಾನ ಮಾಡಿದ್ದಾರೆ.
ಕೋವಿಡ್-೧೯ರ ಮುನ್ನೆಚ್ಚರಿಕೆ ಕ್ರಮಗಳಡಿ ಉತ್ಸಾಹ ತೋರಿದ ಮತದಾರ
ಜಿಲ್ಲೆಯ ಏಳು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆದ ಚುನಾವಣೆಯನ್ನು, ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತವು ಕೋವಿಡ್-೧೯ಗೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯನ್ನು ನಡೆಸಿತು. ಅಸಕ್ತರಿಗೆ ಮತ ಚಲಾಯಿಸಲು ಅನಕೂಲವಾಗುವಂತೆ ವ್ಹೀಲ್‌ಚೇರ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಯುವಕರು, ಯುವತಿಯರು, ಮಹಿಳೆಯರು, ವೃದ್ಧರು, ವಿಕಲಚೇತನರು ಮತ್ತು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಸೇರಿದಂತೆ ಮತದಾನ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂಧಿ ಮಾಸ್ಕ್ ಧರಿಸಿ, ಕೈಗೆ ಸ್ಯಾನಿಟೈಸರ್ ಮಾಡಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಪೋಲಿಸರು ಮತದಾನ ಕೇಂದ್ರದ ಸುತ್ತ-ಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದರು.
ಶಾಂತಿಯುತ ಮತದಾನ:
ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಂಪೂರ್ಣ ಶಾಂತಿಯುತವಾಗಿ ನಡೆದಿದೆ. ಅತ್ಯಂತ ಹೆಚ್ಚು ಜನ ಉತ್ಸುಕತೆಯಿಂದ ಮತದಾನದಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯ ಎಲ್ಲ ಪ್ರಜ್ಞಾವಂತ ಮತದಾರರಿಗೆ, ಸಹಕರಿಸಿದ ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಿಕೊಟ್ಟ ಚುನಾವಣಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಾ. ಹರೀಶಕುಮಾರ ಕೆ. ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.