ಭಟ್ಕಳ : ನಾಡಿನ ಹಿರಿಯ ಕಥೆಗಾರ್ತಿ ಜಯಾ ಯಾಜಿ ಶಿರಾಲಿ (೬೭) ಅವರು ಇಂದು ಮುಂಜಾನೆ ಭಟ್ಕಳದ ಶಿರಾಲಿಯ ಅವರ ಸ್ವಗೃಹದಲ್ಲಿ ನಿಧನರಾದರು.
ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ‘ಶಂಕ್ರಿ’, ‘ಅವಲೋಕನ, ‘ಗುಟ್ಟು ಗುಟ್ಟೇ’, ‘ಗಿಣಿಮರಿ’, ‘ಮಂದಹಾಸ’, ‘ಜಾಜಿ ಗಿಡದ ಗುಬ್ಬಿಗಳು’ ಮುಂತಾದ ಕೃತಿಗಳನ್ನು ನೀಡಿದ್ದಾರೆ.
ವಿವಾಹ ಪೂರ್ವದಲ್ಲಿ ‘ಜಯಾ ಭಟ್ಟ ಅಗಸೂರು’, ‘ಸಹ್ಯಾದ್ರಿ’ ಕಾವ್ಯ ನಾಮದಲ್ಲಿ ಬರೆಯುತ್ತಿದ್ದ ಅವರು ಬರಹಗಾರ ನಾರಾಯಣ ಯಾಜಿ ಅವರನ್ನು ಮದುವೆಯಾದ ನಂತರ ಜಯಾ ಯಾಜಿ ಶಿರಾಲಿ ಎಂಬ ಹೆಸರಿನಲ್ಲಿ ಬರೆಯುತ್ತಿದ್ದರು.
ಜಯಾ ಯಾಜಿ ಶಿರಾಲಿ ಅವರಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಸಾಲಿನ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-೨೦೨೦’ ಘೋಷಿಸಿತ್ತು. ಆದರೆ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅನಾರೋಗ್ಯದ ಕಾರಣದಿಂದ ಬರಲಾಗಲಿಲ್ಲ. ಅನಂತರವೂ ಬಹು ಕಾಲ ತೀವ್ರ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲೇ ಕಳೆದಿದ್ದರಿಂದ ಜಯಾ ಯಾಜಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ. ಅಂದು ನಾಲ್ವರು ಯುವ ಬರಹಗಾರರಿಗಷ್ಟೇ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
ಇದೀಗ ಜಯಾ ಯಾಜಿ ಶಿರಾಲಿ ಅವರು ನಿಧನರಾದ್ದರಿಂದ ಮುಂದೊಂದು ದಿನ ಅವರ ಕುಟುಂಬ ದುಃಖದಿಂದ ಚೇತರಿಸಿಕೊಂಡ ಮೇಲೆ ಸರಳ ಸಮಾರಂಭ ಏರ್ಪಡಿಸಿ ಮರಣೋತ್ತರವಾಗಿ ಜಯಾ ಯಾಜಿ ಅವರಿಗೆ ಗೌರವ ಪೂರ್ವಕವಾಗಿ ಪುಷ್ಪ ನಮನ ಸಲ್ಲಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಜಯಾ ಯಾಜಿ ಅವರನ್ನು ಈ ನೆಲ ಯಾವತ್ತೂ ಸ್ಮರಿಸಿಕೊಳ್ಳುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.