ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ಪಿ.ಯು ಕಾಲೇಜಿನಲ್ಲಿ ವಿಧಾತ್ರಿ ಅಕಾಡಮಿಯ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗಾಗಿ ಎರಡು ದಿನದ ವ್ಯಕ್ತಿತ್ವ ವಿಕಸನ ಹಾಗೂ ಮಾರ್ಗದರ್ಶನ ಶಿಬಿರ ಯಶಸ್ವಿಯಾಗಿ ಸಂಪನ್ನವಾಯಿತು.
ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಪ್ರಸ್ತುತ ಬೀದರ ಜಿಲ್ಲೆಯಲ್ಲಿ ಸಂಕಲ್ಪ ಅಗ್ರಿ ಸರ್ವಿಸಸ್ ಸಂಸ್ಥೆಯ ಸಂಸ್ಥಾಪಕ ಪಿ. ವೇಣುಗೋಪಾಲರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು ತಂತ್ರಜ್ಞಾನ ಎಂಬುದು ಜೀವನಕ್ಕೆ ಉಪಯುಕ್ತ ಎಂಬ ಬಗ್ಗೆ ಕೊರೋನಾ ಕಲಿಸಿಕೊಟ್ಟಿದೆ. ಅವರವರ ಮಾನಸಿಕ ಸ್ಥಿತಿಯ ಮೇಲೆ ವಸ್ತುಗಳ ಬಳಕೆ ಪ್ರಭಾವ ಬೀರುತ್ತದೆ. ಮೊಬೈಲ್ ಕೇವಲ ಮನೋರಂಜನ ವಸ್ತು ಎಂಬ ಬಗ್ಗೆ ತಿಳಿಯಬಾರದು, ಅದರಿಂದ ಆಗುವ ಉಪಯೋಗ ನಾವು ತಿಳಿಯಬೇಕು. ಅದನ್ನು ಒಳಿತಿಗಾಗಿ ಬಳಸಿಕೊಳ್ಳಬೇಕು ಎಂಬುದನ್ನು ಮಕ್ಕಳು ಅರಿತಿರಬೇಕು ಎಂದರು. ಮಹಾಭಾರತದಲ್ಲಿ ಅರ್ಜುನ ಮೀನಿನ ಕಣ್ಣಿಗೆ ಬಾಣ ಹೊಡೆಯುವಾಗ ತದೇಕಚಿತ್ತದಿಂದ ಕಣ್ಣನ್ನು ಮಾತ್ರವೇ ನೋಡಿದ ಅಂತೆಯೇ ನಾವು ಏನನ್ನು ಸಾಧಿಸಬೇಕಿದೆಯೋ ಅದನ್ನೇ ನೋಡಬೇಕು. ನಮ್ಮ ಸಾಧನೆ ಉನ್ನತವಾಗಬೇಕಾದರೆ ನಮ್ಮ ಕಾಯಕವೂ ಉನ್ನತವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಂಶುಪಾಲರಾದ ಮಹೇಶ ಎಸ್ ಉಪ್ಪಿನ ಸಂಸ್ಥೆಯ ಪರಿಚಯ ಮಾಡಿಸುತ್ತಾ ಈವರೆಗೆ ಕೈಗೊಂಡ ಕಾರ್ಯಕ್ರಮಗಳು ಹಾಗೂ ವಿಧಾತ್ರಿಯ ಮೂಲಕ ಕೊಂಕಣ ಎಜ್ಯುಕೇಶನ್ ವಿದ್ಯಾರ್ಥಿಗಳಿಗೆ ತಂದಿರುವ ಹೊಸ ಅವಕಾಶವನ್ನು ವಿವರಿಸಿದರು. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಇರುವ ಉಪನ್ಯಾಸಕರ ಪರಿಚಯ ಮಾಡಿದ ಅವರು ಸಂಸ್ಥೆಯಲ್ಲಿ ಮುಂದೆ ನಡೆಯುವ ಕಾರ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ನೀಡಲಿರುವ ತರಬೇತಿಗಳ ಬಗ್ಗೆ ವಿವರಿಸಿದರು.
ಕನ್ನಡ ಉಪನ್ಯಾಸಕ ಚಿದಾನಂದ ಭಂಡಾರಿ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಮನೋಜ ಕುಮಾರ್ ಪ್ರಾರ್ಥಿಸಿದರು, ನಿಶಾ ಬ್ರಿಟೋ ವಂದಿಸಿದರು. ಕಾರ್ಯಕ್ರಮದಲ್ಲಿ ವಿಧಾತ್ರಿ ಅಕಾಡಮಿಯ ಸಂಚಾಲಕ ಗುರುರಾಜ ಶೆಟ್ಟಿ, ಉಪ ಪ್ರಾಂಶುಪಾಲರಾದ ಸುಜಾತಾ ಹೆಗಡೆ ಹಾಗೂ ಉಪನ್ಯಾಸಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.