ಕಾರವಾರ : ‘ಸ್ವಚ್ಛ ಸಂಕಲ್ಪ ಮೂಲಕ ಸ್ವಚ್ಛ ಸಿದ್ಧಿ’ ಕಾರ್ಯಕ್ರಮದ ಅಡಿ ಜಿಲ್ಲೆಯಾದ್ಯಂತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.
‘ನೈರ್ಮಲ್ಯ ಮತ್ತು ಜನಾರೋಗ್ಯ ಕ್ಷೇತ್ರದಲ್ಲಿ ದೇಶವು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಾರ್ವಜನಿಕರಿಂದ ಸಲಹೆ, ಮಾರ್ಗದರ್ಶನ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರಬಂಧ, ಕಿರುಚಿತ್ರ ಹಾಗೂ ಬಣ್ಣದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗಿದೆ’ ಎಂದು ಹೇಳಿದರು.
‘ಇದೇ 3 ಮತ್ತು 4ರಂದು ‘ಸ್ವಚ್ಛ ಭಾರತಕ್ಕೆ ನಾನು ಏನು ಮಾಡಬೇಕು?’ ಎಂಬ ಶೀರ್ಷಿಕೆಯಡಿ ಎಲ್ಲ ಶಾಲೆ, ಕಾಲೇಜುಗಳಲ್ಲಿ ಗರಿಷ್ಠ 250 ಪದಗಳ ಪ್ರಬಂಧ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಇನ್ನು, ಪ್ರತಿ ಗ್ರಾಮ ಪಂಚಾಯ್ತಿಯಿಂದ ಇದೇ 5ರ ಒಳಗಾಗಿ ‘ಭಾರತದ ಸ್ವಚ್ಛತೆಗೆ ನನ್ನ ಕೊಡುಗೆ’ ಶೀರ್ಷಿಕೆಯಡಿ ಕಿರುಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಪ್ರತಿ ಕಿರುಚಿತ್ರದ ಗರಿಷ್ಠ ಅವಧಿ 2ರಿಂದ 3 ನಿಮಿಷ ಮೀರಿರಬಾರದು. ಇದರಲ್ಲಿ ಕನಿಷ್ಠ ಒಂದು ಪ್ರಬಂಧ ಹಾಗೂ ಕಿರುಚಿತ್ರವನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ತಾಲ್ಲೂಕು ಪಂಚಾಯ್ತಿಗೆ ಸಲ್ಲಿಸಬೇಕು. ಪ್ರಬಂಧಗಳನ್ನು ಇದೇ 5ರಂದು ಹಾಗೂ ಕಿರುಚಿತ್ರಗಳನ್ನು ಇದೇ 7ರ ಒಳಗೆ ಕೇಂದ್ರ ಸರ್ಕಾರದ www.mygov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ’ ಎಂದು ತಿಳಿಸಿದರು.
‘ಇದೇ 5 ಮತ್ತು 6ರಂದು ಕಿರಿಯ ಪ್ರಾಥಮಿಕ ಶಾಲೆಗಳ 1ರಿಂದ 5ನೇ ತರಗತಿಯ ಮಕ್ಕಳಿಗಾಗಿ ‘ಸ್ವಚ್ಛ ಭಾರತ ನನ್ನ ಕನಸು’ ಶೀರ್ಷಿಕೆಯಡಿ ಬಣ್ಣದ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಸಂಬಂಧಿಸಿದ ಶಾಲಾ ಮುಖ್ಯಾಧ್ಯಾಪಕರು ಬಣ್ಣದ ಚಿತ್ರಗಳನ್ನು ಹಾಗೂ ಪ್ರಬಂಧಗಳನ್ನು ಶೇಖರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸಲ್ಲಿಸಲಿದ್ದಾರೆ’ ಎಂದರು.

RELATED ARTICLES  ಯಶೋಧರಾ ನಾಯ್ಕ ಟ್ರಸ್ಟ ಮಹಿಳೆಯರಿಗೆ ದಾರಿದೀಪವಾಗಿದೆ : ಕೃಷ್ಣಮೂರ್ತಿ ಹೆಬ್ಬಾರ.