ನವದೆಹಲಿ: ಇಂಗ್ಲೆಂಡ್ನಲ್ಲಿ ಪತ್ತೆಯಾಗಿರೋ ಹೊಸ ರೂಪದ ಮ್ಯೂಟಂಟ್ ಕೊರೊನಾವೈರಸ್ ಭಾರತಕ್ಕೂ ಹರಡಿದೆ. ಇತ್ತೀಚೆಗೆ ಇಂಗ್ಲೆಂಡ್ನಿಂದ ಭಾರತಕ್ಕೆ ವಾಪಾಸ್ಸಾಗಿದ್ದ 6 ಮಂದಿಗೆ ರೂಪಾಂತರಿ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ. ಬೆಂಗಳೂರಿನಲ್ಲಿ ಮೂವರಿಗೆ, ಹೈದರಾಬಾದ್ನಲ್ಲಿ ಇಬ್ಬರು ಹಾಗೂ ಪುಣೆಯಲ್ಲಿ ಒಬ್ಬರಲ್ಲಿ ಈ ರೂಪಾಂತರಿ ಸೋಂಕು ಇರುವುದು ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಇಂದು ಮಾಹಿತಿ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯ ಡಾ. ವಿಶಾಲ್ ಅವರು, ಜನರು ನಮ್ಮಲ್ಲಿ ಕೊರೊನಾ ಸೋಂಕು ದೂರವಾಗಿದೆ ಎಂದು ನಿರ್ಲಕ್ಷ್ಯ ಮಾಡುವುದು ಸರಿ ಅಲ್ಲ. ಭಾರತದಲ್ಲಿ ಕೊರೊನಾ 2ನೇ ಅಲೆ ಹಬ್ಬುವ ಸಾಧ್ಯತೆ ಇದೆ ಎಂದರು. ರೂಪಾಂತರಿ ಕೊರೊನಾ ಸೋಂಕು ಮತ್ತಷ್ಟು ತ್ವರಿತವಾಗಿ ಹರಡುವ ಪ್ರಭಾವ ಹೆಚ್ಚಿದೆ. ಹೊಸ ಮ್ಯೂಟಂಟ್ ಇರೋ ಕಾರಣ ಇದು ನಮ್ಮ ದೇಹದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಸ್ಪಷ್ಟವಾಗಿಲ್ಲ. ಆದ್ದರಿಂದ ಮತ್ತಷ್ಟು ಎಚ್ಚರಿಕೆಯಿಂದ ಇರುವುದು ಬಹುಮುಖ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.