ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತಾರೇಸರದ ಕಮಲಾಕ್ಷೀ ಮತ್ತು ನಾರಾಯಣ ಹೆಗಡೆಯವರ ಪುತ್ರನಾದ ‘ನವೀನ್ ನಾರಾಯಣ ಹೆಗಡೆ’ಯವರು 132ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಪ್ರಸಕ್ತ ಶಿರಸಿಯ ಎಮ್.ಇ.ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಇವರು ಕೊರೋನಾ ಮಹಾಮಾರಿಯಿಂದ ಸಂಪೂರ್ಣ ದೇಶವೇ ‘ಲಾಕ್ ಡೌನ್’ ಆದ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾದ್ಯಂತ ಮನೆಮನೆಗೆ ತೆರಳಿ ಔಷದೋಪಕರಣ,ಆಹಾರ ಕಿಟ್ ಸೇರಿದಂತೆ ಮುಂತಾದ ಎಲ್ಲಾ ಅಗತ್ಯ ವಸ್ತುಗಳನ್ನು 45ದಿನಗಳ ಕಾಲ ಸತತವಾಗಿ ಪೂರೈಸಿ ‘ಕೊರೋನಾ ವಾರಿಯರ್’ಆದ ಕೀರ್ತಿ ಇವರಿಗೆ ಸಲ್ಲುತ್ತದೆ.
ಯುವಕರಿಂದ ಯುವಕರಿಗಾಗಿ ಯುವಭಾರತ ನಿರ್ಮಾಣದ ಕನಸನ್ನು ಹೊತ್ತು ಕಾಲೇಜು ಜೀವನದಿಂದಲೇ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇವರು ಈ ಹಿಂದೆ ಎಮ್.ಇ.ಎಸ್ ವಾಣಿಜ್ಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿ ಕಾರ್ಯದರ್ಶಿ(GS) ಆಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅಷ್ಟೇಅಲ್ಲದೆ ತುರ್ತು ರಕ್ತ ಸೇವೆಯನ್ನು ಬಯಸಿ ಕರೆಮಾಡಿದ ಜನತೆಗೆ ರಕ್ತವನ್ನು ಒದಗಿಸುವ ಬ್ರಹತ್ ರಕ್ತಸೇವಾ ಬಳಗವೊಂದನ್ನೂ ಸಹ ಇವರು ಹೊಂದಿದ್ದಾರೆ. ಇವರ ಕ್ಷೇತ್ರದಲ್ಲಿ ಬಹುವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ರೀಡಾಕೂಟವನ್ನು ಇವರು ಪುನರಾರಂಭಿಸುವುದರ ಮೂಲಕ ಗ್ರಾಮಕ್ಕೆ ಇನ್ನಷ್ಟು ಗರಿಮೆಯನ್ನು ತಂದುಕೊಟ್ಟಿದ್ದಾರೆ. ಇವೆಲ್ಲವನ್ನು ಮನಗಂಡ ತಾರೇಸರದ ಜನತೆ ಒಳ್ಳೆಯ ನಾಯಕತ್ವಕ್ಕೆ ಇವರು ಯೋಗ್ಯರೆಂದು ನಿರ್ಧರಿಸಿ ‘ನವೀನ್ ಹೆಗಡೆ’ಯವರನ್ನು ಚುನಾವಣಾ ಕಣದಲ್ಲಿ ನಿಲ್ಲಿಸಿ ತಮ್ಮೆಲ್ಲಾ ಅಮೂಲ್ಯವಾದ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ.
ಅನುಭವವಾಗುವುದು ವಯಸ್ಸಿನಿಂದಲ್ಲ;ಪರಿಸ್ಥಿತಿಯಿಂದ ಎಂಬಂತೆ 23ರರ ಹರೆಯದ ಸ್ವತಂತ್ರ ಅಭ್ಯರ್ಥಿಯಾದ ‘ನವೀನ್ ನಾರಾಯಣ ಹೆಗಡೆ’ಯವರು ವಿಜಯವನ್ನು ಸಾಧಿಸಿ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಹೊರಹೊಮ್ಮಿದ್ದಾರೆ.