ಯಲ್ಲಾಪುರ: ನಾಳೆ ಮುಸ್ಲಿಂ ರ ತ್ಯಾಗ ಬಲಿದಾನದ ಪವಿತ್ರ ಹಬ್ಬ ಬಕ್ರೀದ್, ಯಲ್ಲಾಪುರ ಮಾರುಕಟ್ಟೆಯಲ್ಲಿ ಕುರಿಗಳ ಮಾರುಕಟ್ಟೆ ಭರ್ಜರಿಯಾಗಿ ನಡೆಯುತ್ತಿದೆ. ಕುರಿ ಕೊಳ್ಳದಿದ್ದರು ಆನೆ ಗಾತ್ರದ ಕುರಿ ಆಡುಗಳನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.
ಯಲ್ಲಾಪುರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮುಸ್ಲಿಮರ ಜನಸಂಖ್ಯೆ ಬಹಳ ಕಡಿಮೆ, ಆದರೂ ಬಕ್ರಿದ ಹಾಗೂ ಇನ್ನಿತರ ಹಬ್ಬಗಳಿಗೆ 100 ರಿಂದ 200 ಕ್ಕೂ ಮೆಲ್ಪಟ್ಟು ಕುರಿ ಆಡುಗಳನ್ನು ಬಲಿ ಕೊಡಲಾಗುತ್ತದೆ. ಇಷ್ಟೆ ಪ್ರಮಾಣದ ಕುರಿ ಮೇಕೆಗಳು ಹಬ್ಬದಂದು ಯಲ್ಲಾಪುರ, ಕಿರವತ್ತಿ, ಮಂಚಿಕೇರಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ.
ಒಂದು ತಿಂಗಳಿನಿಂದಲೇ ಕಲಘಟಗಿ, ವಿಜಯಪುರ, ಅಳ್ನಾವರ ಕಡೆಯಿಂದ ಮೇಕೆ ಕುರಿಗಳನ್ನು ತಂದು ಇಲ್ಲಿಯ ಮೀನು ಮಾಂಸದ ಮಾರುಕಟ್ಟೆಯಲ್ಲಿ ತಂದು ಕಟ್ಟಿಡಲಾಗಿದೆ. ಅಲ್ಲದೆ ಕುರಿ ಸಾಕಿ ಮಾರುವವರು ಇಲ್ಲಿ ಠಿಕಾಣಿ ಹೂಡಿದ್ದಾರೆ.
ಬಾಗಲಕೋಟೆ, ಅಮೀನಗಡ, ಕರಿಕುರಿ, ಗೆಣಸಿ, ಬಾಂಬೆ ಮರಿ ಸೇರಿದಂತೆ ವಿವಿಧ ತಳಿಗಳ ಕುರಿಗಳು ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಕುರಿಗಳಿಗೆ ಕನಿಷ್ಠ 8,000ದಿಂದ 35,000 ಸಾವಿರದವರೆಗೆ ಬೆಲೆ ನಿಗದಿ ಪಡಿಸಲಾಗಿದೆ.
ಒಂದು ವಾರದಿಂದ ನಿತ್ಯ ಮಳೆ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ವ್ಯಾಪಾರಿಗಳ ಪಾಲಿಗೆ ಸವಾಲಾಗಿದೆ. ಮಳೆಯಲ್ಲಿ ಒದ್ದೆಯಾದ ಕುರಿಗಳು ಕಾಯಿಲೆಗೆ ಒಳಗಾಗುತ್ತಿರುವುದು ವ್ಯಾಪಾರಿಗಳಿಗೆ ಇನ್ನೊಂದು ಸಮಸ್ಯೆಯಾಗಿದೆ, ಆದರೂ ಮಾರುಕಟ್ಟೆಗೆ ಮಾರಾಟಕ್ಕೆ ತಂದ ಕುರಿಗಳಲ್ಲಿ ಶೇ 75 ರಷ್ಟು ಕುರಿಗಳು ಮಾರಾಟ ವಾಗಿರುವುದರಿಂದ ಅವರು ನಿರಾಳರಾಗಿದ್ದಾರೆ.
ಯಲ್ಲಾಪುರದ ಶ್ರೀಮಂತ ಮುಸ್ಲಿಮರು ನೇರವಾಗಿ ಹುಬ್ಬಳ್ಳಿ ವಿಜಯಪುರದ ದೊಡ್ಡ ಕುರಿ ಮಾರುಕಟ್ಟೆಯಿಂದ ತಮಗೆ ಇಷ್ಟವಾದ ಗುರಿಗಳನ್ನು ಖರೀದಿಸಿ ತಂದು ಮಾಂಸವನ್ನು ದಾನ ಮಾಡುತ್ತಾರೆ.
ಕುರಿ ಖರೀದಿಯೊಂದಿಗೆ ಮುಸ್ಲಿಮರಿಗೆ ತ್ಯಾಗ ಬಲಿದಾನದ ಪ್ರತಿಕವಾಗಿರುವ ಬಕ್ರಿದ ಹಬ್ಬದ ಸಿದ್ದತೆ ಯಲ್ಲಾಪುರ ಸೇರಿದಂತೆ, ಕಿರವತ್ತಿ ಹಾಗೂ ಮಂಚಿಕೇರಿಗಳಲ್ಲಿ ಬಲು ಜೋರಾಗಿ ನಡೆಯುತ್ತಿದೆ.