ಕುಮಟಾ : ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಹೆಗಡೆಯಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ 6 ಮತ್ತು 7ನೇ ತರಗತಿಯ ಪ್ರಾರಂಭೋತ್ಸವ ಆಕರ್ಷಣೀಯವಾಗಿ ನಡೆಯಿತು. ವಿದ್ಯಾರ್ಥಿಗಳು ಶಾಲೆಗೆ ಆಕರ್ಷಿತರಾಗುವಂತೆ ಶಾಲೆಯ ದ್ವಾರವನ್ನು ಬಲೂನು ಹಾಗೂ ತಳಿರು ತೋರಣಗಳಿಂದ ಸಿಂಗರಿಸಿ ಕನ್ನಡ ಜ್ಞಾನಪೀಠ ಕವಿಗಳ ಭಾವಚಿತ್ರವನ್ನು ಪ್ರದರ್ಶಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ಪ್ರಾರಂಭದಲ್ಲಿ ಮುಖ್ಯಾಧ್ಯಾಪಕರಾದ ಮಂಗಲ ಹೆಬ್ಬಾರ್ ವಿದ್ಯಾರ್ಥಿಗಳನ್ನು ಮತ್ತು ಹಾಜರಿದ್ದ ಗಣ್ಯರನ್ನು ಸ್ವಾಗತಿಸಿದರು. ಶಾಲೆಯ ವಿದ್ಯಾರ್ಥಿನಿ ಕುಮಾರಿ ಚಿತ್ರವತಿ ಮಾಸ್ತಿ ಮುಕ್ರಿ ರಿಬ್ಬನ್ ಕತ್ತರಿಸಿ ಪ್ರಾರಂಭೋತ್ಸವ ಕ್ಕೇ ಚಾಲನೆ ನೀಡಿದರು.
ಬಾಗಿಲಲ್ಲಿ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆಯನ್ನು ದೈಹಿಕ ಶಿಕ್ಷಕಿ ಶಾಮಲಾ ಪಟಗಾರ ನಿರ್ವಹಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ ನಾಯ್ಕ್ ಶಿಕ್ಷಣ ಇಲಾಖೆಯ ಬಿ ಆರ್ ಪಿ ಚೂಡಾಮಣಿ ಪಟಗಾರ ಸಿ ಆರ್ ಪಿ ನರಹರಿ ಭಟ್ ಎಸ್ಡಿಎಂಸಿ ಪದಾಧಿಕಾರಿಗಳು ಹಾಜರಿದ್ದರು. ಶಿಕ್ಷಕರಾದ ರೇಣುಕಾ ನಾಯ್ಕ್, ಶ್ರೀಧರ್ ಗೌಡ ನಾಗರಾಜ್ ಶೆಟ್ಟಿ ನಯನ ಪಟಗಾರ ಸಹಕರಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗಣ್ಯರು ಕೋವಿಡ್ 19 ರ ಕಾರಣದಿಂದ ಹೆದರುವುದು ಬೇಡ ಆದರೆ ಕಾಳಜಿ ಇರಲಿ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಕೊಡಿ ಕೈ ತೊಳೆಯುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಪಾಲಿಸಿ ಎಂದು ಶುಭಕೋರಿದರು. ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಲಾಯಿತು.