ಕಾರವಾರ : ಉತ್ತರಕನ್ನಡದ ಅಲ್ಲಲ್ಲಿ ಸುದ್ದಿಯಾಗುತ್ತಿದ್ದ ಕಳ್ಳತನ ಪ್ರಕರಣ ಇದೀಗ ಮತ್ತೆ ಅಂಕೋಲಾದಲ್ಲಿ ಸುದ್ದಿಯಾಗಿದೆ.ಅಂಕೋಲಾ ತಾಲೂಕಿನ ಬಾಸಗೋಡ ಕೋಗ್ರೆ ಗ್ರಾಮದಲ್ಲಿ ಶನಿವಾರ ರಾತ್ರಿ ಮನೆಯಲ್ಲಿ ಕಳ್ಳತನವಾಗಿದ್ದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿದೆ.
ಮಹಾಬಲೇಶ್ವರ ಸಣ್ಣಕೂಸ ಗೌಡ ಅವರ ಹೊಸ ಮನೆಯಲ್ಲಿ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ.
ಮನೆಯ ಮುಂಬಾಗಿಲಿನ ಕಬ್ಬಿಣದ ಗ್ರಿಲ್ಗೆ ಹಾಕಿದ ಬೀಗವನ್ನು ಮುರಿದು, ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್ ರೂಮ್ ನ ಬಾಗಿಲಿನ ಲಾಕ್ ಕಟ್ ಮಾಡಿ, ಕಪಾಟಿನಲ್ಲಿದ್ದ 27 ಗ್ರಾಂ.ನ 1 ನೆಕ್ಲೆಸ್, 15 ಗ್ರಾಂನ 2 ಚೈನ್ , 10 ಗ್ರಾಂ.ನ 3 ಉಂಗುರ ಸೇರಿ ಒಟ್ಟು ಅಂದಾಜು 1 ಲಕ್ಷ 82 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ಕಳವು ಮಾಡಿರುವುದಾಗಿ ಮಹಾಬಲೇಶ್ವರ ಗೌಡ ದೂರು ನೀಡಿದ್ದಾರೆ.
ಈ ಸಂಬಂಧ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಾನಂದ ನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ. ಎಲ್ಲಾ ವಿಧದದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.