ಕುಮಟಾ: ತಾಲೂಕಿನ ಬರಗದ್ದೆ ಸೊಸೈಟಿಯಲ್ಲಿನ ಅವ್ಯವಹಾರದ ಆರೋಪದ ಮೇಲೆ ಗ್ರಾಮೀಣ ಸೇವಾ ಸಹಕಾರಿ ಸಂಘ ಬರಗದ್ದೆ ಇದರ ಮಾಜಿ ಮುಖ್ಯ ಕಾರ್ಯನಿರ್ವಾಹಕನಾದ ಲಕ್ಷ್ಮಣ ಪಟಗಾರ ಅವರನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಖ್ಯ ಕಾರ್ಯ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷ್ಮಣ ಪಟಗಾರ ಅವರನ್ನು ಈಗಾಗಲೇ ಸೊಸೈಟಿಯಿಂದ ಅಮಾನತುಗೊಳಿಸಲಾಗಿದೆ. ಆದರೂ ಸಹ ಸಂಘದ ಮೊಹರು, ಲೆಕ್ಕಪತ್ರ, ಲೆಕ್ಕಪತ್ರ ತಂತ್ರಾಂಶ, ಸಂಘದ ಮುದ್ರೆ ಇನ್ನಿತರ ದಾಖಲೆಗಳನ್ನು ಸೃಷ್ಟಿಸಿ, ಸಂಘದ ಹಲವು ಸದಸ್ಯರುಗಳಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ, ರೈತರ ಬೆಳೆ ಸಾಲಾ ಚುಕ್ತಾ ಮಾಡಲಾಗಿದೆ ಎಂದು ಸುಳ್ಳು ಪ್ರಮಾಣ ಪತ್ರವನ್ನು ಸೃಷ್ಟಿಸಿ, ನೀಡಿದ್ದಾರೆ ಎಂಬ ಆರೋಪವೂ ಸಹ ಅವರ ಮೇಲಿದೆ.

RELATED ARTICLES  ಕುಮಟಾ ದೀವಗಿ ಸಮೀಪ ಹೊತ್ತಿ ಉರಿದ ಕಾರು: ಕೆಲಕಾಲ‌ ಜನ ಕಂಗಾಲು!

ಸಂಘದ ಎಲ್ಲ ದಾಖಲೆಗಳನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಂಡಾದ ಬಳಿಕವೂ ತನ್ನ ಸಹಿಯೊಂದಿಗೆ ಸಂಘದ ಸದಸ್ಯರುಗಳಿಗೆ ಸುಳ್ಳು ಕಾಗದ ಪತ್ರವನ್ನು ಸೃಷ್ಟಿಸಿ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಂಘದ ಅಧ್ಯಕ್ಷ ಗಣಪತಿ ಗೋಪಾಲಕೃಷ್ಣ ಹೆಗಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಲ್ಲದೇ, ಸಂಘದಲ್ಲಿ ಇಡಬೇಕಾದ ರೈತರ ಸಾಲದ ಬಾಂಡ್ ಜಮಾ ಮತ್ತು ಖರ್ಚಿನ ಪಾವತಿಗಳು ಸೇರಿದಂತೆ ಅನೇಕ ಮುಖ್ಯ ಕಾಗದ ಪತ್ರಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದನು. 2019-20 ನೇ ಸಾಲಿಗೆ ಸಂಬಂಧಿಸಿದ ಸಾಲ ಮರುಪಾವತಿಗೆ 53 ಕ್ಕೂ ಹೆಚ್ಚು ರೈತರಿಗೆ ಸುಳ್ಳು ರಸೀದಿ ನೀಡಿ 40.23.326 ರೂ. ಹಾಗೂ ಮಾಧ್ಯಮಿಕ ಸಾಲ ಮರುಪಾವತಿಗೆ ಸುಮಾರು 21 ರೈತರಿಗೆ 2,59,404 ರೂ. ನ ರಸೀದಿ ನೀಡಿ ಸಂಘಕ್ಕೆ ಮತ್ತು ರೈತರಿಗೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

RELATED ARTICLES  ಕುಮಟಾ ಅರ್ಬನ್ ಬ್ಯಾಂಕ್ ವತಿಯಿಂದ ಪ್ರತಿಭಾ ಪುರಸ್ಕಾರ: ಸಾಧಕ ೧೪ ವಿದ್ಯಾರ್ಥಿಗಳಿಗೆ ಸನ್ಮಾನ

ದೂರಿನ ಹಿನ್ನಲೆಯಲ್ಲಿ ಕುಮಟಾ ಪೊಲೀಸರು ಲಕ್ಷ್ಮಣ ಪಟಗಾರ ಅವರನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.