ಶಿರಸಿ: ಸ್ಥಳೀಯ ಕಬ್ಬನ್ನು ಅರೆದು ಹಾಲಿನ ರುಚಿಯನ್ನು ನಗರವಾಸಿಗಳಿಗೆ ಉಣಬಡಿಸುವ ‘ಆಲೆಮನೆ ಹಬ್ಬ’ ನಗರದ ಕದಂಬ ಸಂಸ್ಥೆ ಆವರಣದಲ್ಲಿ ಶುಕ್ರವಾರದಿಂದ ಆರಂಭಗೊಂಡಿದೆ. ಒಂದು ವಾರಗಳ ಕಾಲ ನಡೆಯುವ ಈ ಹಬ್ಬ ಹಲವು ಆಕರ್ಷಣೆಯನ್ನೊಳಗೊಂಡಿದೆ.

‘ಬಾಬಾ ಬಾಯ್ಸ್’ ಎಂಬ ಕಾಲೇಜು ವಿದ್ಯಾರ್ಥಿಗಳ ತಂಡ ಕದಂಬ ಸಂಸ್ಥೆ ಮತ್ತು ಉತ್ತರಕನ್ನಡ ಸಾವಯವ ಒಕ್ಕೂಟದ ಜೊತೆ ಈ ಯತ್ನ ನಡೆಸಿದೆ. ಹಬ್ಬದಲ್ಲಿ ಆಲೇಮನೆಯ ವಿಶೇಷ ಖಾದ್ಯಗಳಾದ ತೊಡೆದೇವಿನ ಜೊತೆ ಮಸಾಲೆ ಮಂಡಕ್ಕಿ, ಮಿರ್ಚಿ, ಮಸಾಲಾ ಪಾಪಡ್, ಜೊತೆಗೆ ತಾಜಾ ಕಬ್ಬಿನ ಹಾಲನ್ನು ನೀಡಲಾಗುತ್ತಿದೆ.
ಹಬ್ಬ ಉದ್ಘಾಟಿಸಿ ಮಾತನಾಡಿದ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ, ವಿದ್ಯಾರ್ಥಿಗಳೇ ಸೇರಿ ಇಂತಹ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಶಿರಸಿ ಜನ ಈ ಯತ್ನ ಮೆಚ್ಚಿಕೊಳ್ಳಲಿದ್ದಾರೆ. ಯುವಕರು ತಮ್ಮೂರಿನ ವಿಶೇಷತೆಗಳನ್ನು ಸಾರ್ವಜನಿಕರಿಗೆ ಹೊಸ ಮಾದರಿಯಲ್ಲಿ ತಲುಪಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕದಂಬ ಸಂಸ್ಥೆ ರೈತರ ಬೆನ್ನೆಲುಬಾಗಿ ನಿಂತಿದ್ದು, ಈಗ ಈ ಪ್ರಯತ್ನವನ್ನು ಪ್ರೋತ್ಸಾಹಿಸುತ್ತಿದೆ.
ಸಾವಯವ ಬೆಲ್ಲವನ್ನು ಸಾರ್ವಜನಿಕರಿಗೆ ಯೋಗ್ಯ ದರದಲ್ಲಿ ನೀಡುವ ಕಾರ್ಯವನ್ನು ಕದಂಬ ಸಂಸ್ಥೆ ಬಹು ವರ್ಷಗಳಿಂದ ಮಾಡಿಕೊಂಡು ಬಂದಿದೆ ಎಂದರು.

RELATED ARTICLES  ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ

ಕದಂಬ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ ಮಾತನಾಡಿ, ಉತ್ಕೃಷ್ಟವಾಗಿ ತಯಾರಿಸಿದ ಬೆಲ್ಲವೂ ಸಹ ಮಳೆಗಾಲದಲ್ಲಿ ಹುಳಿ ಬರುವುದನ್ನು ತಪ್ಪಿಸಲು ಯತ್ನ ನಡೆಯಬೇಕಿದೆ. ವಿಶ್ವ ವಿದ್ಯಾಲಯಗಳು ಈ ಬಗ್ಗೆ ಸಂಶೋಧನೆ ನಡೆಸಿ ರೈತರಿಗೆ ಮಾಹಿತಿ ನೀಡಬೇಕಿದೆ ಎಂದರು. ಕದಂಬ ವ್ಯವಸ್ಥಾಪಕ ವಿಶ್ವೇಶ್ವರ ಭಟ್, ಮಂಜುನಾಥ ಹೆಗಡೆ ಇತರರಿದ್ದರು.

RELATED ARTICLES  ಕಾಲುಸಂಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ