ಬೆಂಗಳೂರು : ತಂತ್ರಜ್ಞಾನ ಮತ್ತು ಉಪಕರಣ ಇಲ್ಲದೆ ಇರುವ ಸಮಯದಲ್ಲಿ ಋಷಿಗಳು ದೂರದಲ್ಲಿರು ಖಗೋಳದ ಬಗ್ಗೆ ಅಧ್ಯಯನ‌ ನಡೆಸಿ ಜ್ಯೌತಿಷವನ್ನು ತಂದರು. ನಮ್ಮೊಳಗಿರುವ ಸೂಕ್ಷ್ಮ ರೋಗಗಳನ್ನು ಗುರುತಿಸಿ, ಆಯುರ್ವೇದವನ್ನು ತಂದರು. ಇವೆಲ್ಲ ಅವರಿಗೆ ಸಾಧ್ಯವಾಗಿದ್ದು ಯೋಗದಿಂದ. ಇಂತಹ ಯೋಗದಿಂದ ನಮ್ಮನ್ನು ನಾವು ತಿಳಿಯಬಹುದು ಎಂದು ಮೈಸೂರಿನ ಖ್ಯಾತ ವಿದ್ವಾಂಸ, ಜ್ಯೋತಿಷಿ ರಾ.ಗಣಪತಿ ಭಟ್ ಹೇಳಿದರು.

ಸಾಧನಾ ಪಿಯು – ಡಿಗ್ರಿ ಕಾಲೇಜ್ ಆಯೋಜಿಸಿದ್ದ ಸಂಸ್ಕೃತೋತ್ಸವದಲ್ಲಿ ‘ಯೋಗ : ಕಲ್ಪನೆ ಮತ್ತು ವಾಸ್ತವಿಕತೆ’ ಬಗ್ಗೆ ಮಾತನಾಡಿದ ಅವರು, ಯೋಗವೆಂದರೆ ಕೂಡುವಿಕೆ, ಹೊಂದಾಣಿಕೆ ಎಂದರ್ಥ. ಇಂದು ತಂದೆ – ಮಗ, ಗಂಡ-ಹೆಂಡತಿ, ಅಧ್ಯಾಪಕ – ವಿದ್ಯಾರ್ಥಿ, ಹೀಗೆ ಪ್ರತಿಯೊಬ್ವರ ನಡುವೆ ಹೊಂದಾಣಿಕೆ ಕಡಿಮೆಯಾಗಿದೆ. ಹಾಗೆಯೇ ನಮ್ಮ ಮಾತು, ಮನಸ್ಸು, ಕೃತಿಗಳ‌ ನಡುವೆಯೂ ಹೊಂದಾಣಿಕೆ ಕಾಣೆಯಾಗಿದೆ‌. ಇವುಗಳ ಹೊಂದಾಣಿಕೆಯೂ ಜೀವನದಲ್ಲಿ ಅಗತ್ಯ ಎಂದು ನುಡಿದರು.

ಮನಸ್ಸು ಟಾರ್ಚ್ ಇದ್ದಂತೆ. ನಾವು ಈ ಟಾರ್ಚ್ ನ್ನು ಹೊರ‌ಮುಖವಾಗಿ ಹಿಡಿದಿದ್ದೇವೆ. ಹಾಗಾಗಿ, ನಮಗೆ ಇಡಿ ಜಗತ್ತು, ಖಗೋಳ, ಬೇರೆ ಗ್ರಹಗಳು, ಹೀಗೆ ಪ್ರತಿಯೊಂದೂ ಕಾಣುತ್ತಿವೆ. ಎಲ್ಲದರ ಬಗ್ಗೆ ಮಾಹಿತಿ ಇದೆ. ಆದರೆ ನಮ್ಮ ಪರಿಚಯವೇ ನಮಗೆ ಆಗಿಲ್ಲ. ಆ‌ ಮನಸ್ಸೆಂಬ ಟಾರ್ಚ್ ನ್ನು ಹಿಮ್ಮುಖ ತಿರುಗಿಸಿದರೆ ನಾವು ಕಾಣುತ್ತೇವೆ. ನಮ್ಮ ಅರಿವು ನಮಗಾಗುತ್ತದೆ ಎಂದರು.

RELATED ARTICLES  ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದ 50ಸಾವಿರಕ್ಕೂ ಹೆಚ್ಚು ಮತದಾರರನ್ನು ಕುಳಿತಲ್ಲಿಂದಲೇ ಸಂಪರ್ಕಿಸಿ, ಮತ ಯಾಚಿಸಲು ಬಿಜೆಪಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಿದೆ!

ಕೈಕಾಲುಗಳನ್ನು ಆಡಿಸುವುದು, ಉಸಿರಾಟ ಮುಂತಾದವುಗಳನ್ನೇ ಯೋಗವೆಂದು ಕರೆಯುತ್ತಿದ್ದೇವೆ. ಯೋಗದ ಫಲ ಸಿಗಬೇಕಾದರೆ, ನಮ್ಮ ಜೀವನವನ್ನು ವ್ಯವಸ್ಥಿತಗೊಳಿಸಬೇಕು. ಜೀವನವಿಧಾನ ಸರಿಯಾಗಬೇಕು. ಅದು ಸರಿಯಾಗದೆ ಕೇವಲ ಆಸನಗಳನ್ನು ಮಾಡಿದರೆ, ಸಿಗುವ ಫಲ ಸಿಗಲಾರದು ಮತ್ತು ದುಷ್ಪರಿಣಾಮ ಉಂಟಾಗಬಹುದು. ಪತಂಜಲಿಮಹರ್ಷಿಗಳು ಆಸನಗಳ ಬಗ್ಗೆ ಹೇಳುವುದಕ್ಕೂ ಮುಂಚೆ ಯಮ – ನಿಯಮಗಳ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿಕೊಟ್ಟರು.

ಸರಿಯಾದ ಹೊತ್ತಿನಲ್ಲಿ ಸರಿಯಾದ ಆಹಾರ – ವಿಹಾರ, ಹೊಂದಾಣಿಕೆಯಾಗುವ, ಯುಕ್ತವಾದ ಕಾರ್ಯ, ಮತ್ತು ಸರಿಯಾದ ಸಮಯದಲ್ಲಿ ಮಲಗುವುದು ಮತ್ತು ಏಳುವುದು‌ ಮಾಡಿದರೆ ಎಲ್ಲ ರೀತಿಯ ದುಃಖವೂ ನಾಶವಾಗುತ್ತದೆ. ಶ್ರೀಕೃಷ್ಣನೂ ಹೀಗೆ ಅಭಿಪ್ರಾಯಪಟ್ಟಿದ್ದಾನೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಖ್ಯಾತ ಪತ್ರಕರ್ತ ವಿಕಾಸ್ ನೇಗಿಲೋಣಿ ಮಾತನಾಡಿ, ಈಗ ಯೋಗದ ಮೂಲ ಸ್ವರೂಪ‌ ಮರೆಯಾಗುತ್ತಿದೆ. ಬೇರೆ ರೀತಿಯ ಕಲ್ಪನೆಗಳನ್ನೇ ಯೋಗವೆಂದು ಕರೆಯಲಾಗುತ್ತಿದೆ. ಜನರಿಗೆ ಯೋಗದ ಮೂಲ ಉದ್ದೇಶ ಮತ್ತು ಸ್ವರೂಪವನ್ನು ತಿಳಿಸಿಕೊಡುವ ಕಾರ್ಯ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ ಉದ್ಘಾಟನೆ.

ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿರಾಜ್ ಉರ್ ರಹಮಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೃಷ್ಣಾನಂದಶರ್ಮಾ ಕಾರ್ಯಕ್ರಮ ಆಯೋಜಿಸಿದ್ದರು. ಡಿಗ್ರಿ ಉಪಪ್ರಾಂಶುಪಾಲ ಡಾ.ಅಜಯ್ ಹಾಗೂ ಪ್ರೊ.ಸೌಮ್ಯಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಮೇಧಾ ಭಾರಧ್ವಾಜ್, ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು‌. ಐಸಿರಿ ಹೆಗಡೆ ಸ್ವಾಗತಿಸಿದರೆ ಶಮೀ ಗಿರೀಶ್ ವಂದಿಸಿದರು. ಅಮೃತಾ, ಅನಘಾ, ಮಾನ್ಯಾ ಪ್ರಾರ್ಥನಾಗೀತೆ ಮಾಡಿದರೆ, ಜಾಹ್ನವೀ ಸ್ವಾಗತ ನೃತ್ಯ ಮಾಡಿದರು. ಈ ಉತ್ಸವದ ಪ್ರಯುಕ್ತ ಆಯೋಹಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

 

ಪ್ರಶಸ್ತಿ ವಿಜೇತರು

ಭಕ್ತಿಗೀತೆ ಸ್ಪರ್ಧೆ –
ಪ್ರಥಮ ಬಹುಮಾನ – ಅಮೃತಾ ರಾಮಾನುಜ
ದ್ವಿತೀಯ ಬಹುಮಾನ – ಅನಘಾ ಭಟ್
ತೃತೀಯ ಬಹುಮಾನ – ಹೇಮಲತಾ ಎಲ್ ಎಚ್
ಸಮಾಧಾನಕರ : ಅನುಪಮಾ ಆರ್

ಭಗವದ್ಗೀತೆ ಪಠಣ ಸ್ಪರ್ಧೆ

ಪ್ರಥಮಬಹುಮಾನ – ಸಮನ್ವಿತಾ
ದ್ವಿತೀಯಬಹುಮಾನ – ಧಾತ್ರಿ
ತೃತೀಯ ಬಹುಮಾನ – ಭಾವನಾ ಕೆ
ಸಮಾಧಾನಕರ : ಜಾಹ್ನವೀ ಬಾಲಾಜಿ