ಕುಮಟಾ : ಸಾಧನೆ ಮಾಡಲು ಬಹಳಷ್ಟು ಕ್ಷೇತ್ರಗಳಿದೆ. ಆದರೆ ಜನರು ನಿರಂತರ ಪ್ರಯತ್ನ ಮಾಡಿದಾಗ ಮಾತ್ರವೇ ಅಂತಹ ಯಶಸ್ಸಿನ ಶಿಖರ ಏರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ತೇಜಸ್ವಿನಿ ದಿಗಂಬರ ವರ್ಣೇಕರ್ ಸಂಗೀತ ಕ್ಷೇತ್ರದಲ್ಲಿ ಬಹಳ ದೊಡ್ಡ ಸಾಧನೆಯತ್ತ ಮುನ್ನುಗ್ಗುತ್ತಿರುವುದು ಕುಮಟಾದ ಜನತೆ ಹೆಮ್ಮೆಪಡುವ ಸಂಗತಿ.
ಕುಮಟಾದ ಉದಯೋನ್ಮುಖ ಪ್ರತಿಭೆಯಾದ ಕುಮಾರಿ ತೇಜಸ್ವಿನಿ ದಿಗಂಬರ ವರ್ಣೇಕರ್ ಇವರು ಭಾರತ ಸರ್ಕಾರದ ಉತ್ತರ ಕ್ಷೇತ್ರ ಸಾಂಸ್ಕೃತಿಕ ಕೇಂದ್ರ ಪಟಿಯಾಲಾ (NZCC) ಸಂಸ್ಕೃತಿ ಮಂತ್ರಾಲಯ (Ministry of culture) ಇವರು ಆಯೋಜಿಸಿದ್ದ ಆನ್ಲೈನ್ ಶಾಸ್ತ್ರೀಯ ಸಂಗೀತ ಉತ್ಸವದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉತ್ತರಕನ್ನಡದ ಪ್ರಪ್ರಥಮ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ.
ಇವರು ಈ ಕಾರ್ಯಕ್ರಮದಲ್ಲಿ ತಮ್ಮ ಹಿಂದೂಸ್ತಾನಿ ಗಾಯನವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿಲಂಬಿತ ಏಕತಾಲ ಹಾಗೂ ದೃತ್ ತೀನತಾಲದಲ್ಲಿ ರಾಗ ಭೀಮಪಲಾಸಿಯನ್ನು ಪ್ರಸ್ತುತಪಡಿಸಿ ಜನಮನ್ನಣೆ ಗಳಿಸಿದರು. ಇವರಿಗೆ ತಬಲಾದಲ್ಲಿ ಎನ್.ಜಿ ಹೆಗಡೆ ಕಪ್ಪೆಕೆರೆ, ಹಾಗೂ ಸಂವಾದಿನಿ ಯಲ್ಲಿ ಶ್ರೀ ವಿಘ್ನೇಶ್ ಭಾಗವತ ಸಾತ್ ನೀಡಿದ್ದರು.
ತೇಜಸ್ವಿನಿ ದಿಗಂಬರ ವರ್ಣೇಕರ್ ತನ್ನ ಪ್ರಾಥಮಿಕ ಸಂಗೀತಾಭ್ಯಾಸವನ್ನು ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ವಿದೂಷಿ ಜಯಲಕ್ಷ್ಮಿ ಭಟ್ಟರವರಲ್ಲಿ ಪ್ರಾರಂಭಿಸಿ, ನಂತರ ಸಾಧನಾ ಸಂಗೀತ ವಿದ್ಯಾಲಯದಲ್ಲಿ ವಿದೂಷಿ ಲಕ್ಷ್ಮಿ ಹೆಗಡೆಯವರಲ್ಲಿ ಸಂಗೀತ ಶಿಕ್ಷಣವನ್ನು ಮುಂದುವರಿಸಿದವರು. ಪಂಡಿತ ಜಿ.ಆರ್ ಭಟ್ಟ ಬಾಳೇಗದ್ದೆ ಅವರಿಂದ ಮಾರ್ಗದರ್ಶನ ಪಡೆದಿದ್ದ ಇವರು ನಂತರ ಕಲ್ಕತ್ತಾದ ಐ.ಟಿ.ಸಿ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಆರು ವರ್ಷಗಳ ಕಾಲ ಶ್ರೀ ಕುಮಾರ ಮರಡೂರರವರ ಬಳಿ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಗೀತ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ತೇಜಸ್ವಿನಿ ದಿಗಂಬರ ವರ್ಣೇಕರ್ ಇವರು ಕುಮಟಾದ ದಿವಂಗತ ಶಂಕರ ಲಕ್ಷ್ಮಣ ವರ್ಣೇಕರ್ ಅವರ ಮೊಮ್ಮಗಳಾಗಿದ್ದಾಳೆ.
ದೇಶದ ಪ್ರತಿಷ್ಠಿತ ವೇದಿಕೆಯಾದ ಬಾಬಾ ಹರಿವಲ್ಲಭ ಸಂಗೀತ ಸಮ್ಮೇಳನ ಇವರು 2019 ಡಿಸೆಂಬರ್ ನಲ್ಲಿ ಜಲಂಧರ್ ನಲ್ಲಿ ನಡೆಸಿದ ರಾಷ್ಟ್ರಮಟ್ಟದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿದ್ದರು. ಪಟಿಯಾಲ, ಪಂಜಾಬ್ ನ North Zone Cultural Center, Ministry of culture, Government of India ಇವರು ಹರಿವಲ್ಲಬ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರಿಗೆ Online ಮೂಲಕ ಸಂಗೀತ ಮಹೋತ್ಸವ ಏರ್ಪಡಿಸಿದ್ದರು. ಅದರಲ್ಲಿ ತೇಜಸ್ವಿನಿ ತಮ್ಮ ಗಾಯನ ಪ್ರಚುರಪಡಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ತೇಜಸ್ವಿನಿ ಅವರ ಗಾಯನದ ಝಲಕ್ ಇಲ್ಲಿದೆ.
ಮುಂಬರುವ ಡಿಸೆಂಬರ್ 2021 ರಲ್ಲಿ ಜಲಂಧರ್ ನಲ್ಲಿ ನಡೆಯುವ ಹರಿವಲ್ಲಭ ಸಂಗೀತ ಸಮ್ಮೇಲನದಲ್ಲಿ ಇವರು ತಮ್ಮ ಸಂಗೀತ ಪ್ರಸ್ತುತಿಯನ್ನು ನೀಡಲಿದ್ದಾರೆ.
ಸಂಗೀತದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ತನ್ನ ಊರಿಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರುತ್ತಿರುವ ತೇಜಸ್ವಿನಿ ದಿಗಂಬರ ವರ್ಣೇಕರ್ ಇವರ ಭವಿಷ್ಯ ಉಜ್ವಲವಾಗಲಿ ಎಂದು ನಾವೆಲ್ಲರೂ ಹಾರೈಸೋಣ.