ಕುಮಟಾ: ಇಂದು ಬ್ಯಾಂಕಿಂಗ್ ಕ್ಷೇತ್ರ ಕೇವಲ ವಾಣಿಜ್ಯ ವಿಭಾಗ ಓದಿದವರನ್ನು ಮಾತ್ರವಲ್ಲದೇ, ಇಂಜಿನಿಯರಿಂಗ್, ಎಂ.ಬಿ.ಎ., ಎಂ.ಎಸ್ಸಿ ಪದವಿ ಪಡೆದವರನ್ನೂ ತನ್ನತ್ತ ಆಕರ್ಷಿಸುತ್ತಿದೆ ಎಂದು ಕೆನರಾ ಬ್ಯಾಂಕಿನ ನಿವೃತ್ತ ಮಹಾ ಪ್ರಬಂಧಕ ಗೋಪಾಲಕೃಷ್ಣ ಕಾಮತ ಸಂವಾದಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೊಬೈಲ್ ಬ್ಯಾಂಕಿಗ್‍ನಲ್ಲಿ ವ್ಯವಹರಿಸುವಾಗ ವಹಿಸಬೇಕಾಗುವ ಎಚ್ಚರಿಕೆ ಮತ್ತು ಕಾಳಜಿಗಳನ್ನು ಜ್ವಲಂತ ಉದಾಹರಣೆಗಳ ಮೂಲಕ ವಿವರಿಸಿದರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬ್ಯಾಂಕ್ ಹಿಂದೆಂದಿಗಿಂತಲೂ ಇಂದು ವಿಪುಲ ಉದ್ಯೋಗಾವಕಾಶ ಕಲ್ಪಿಸುತ್ತಿದೆಯಲ್ಲದೇ ನೇರ ಪರೀಕ್ಷೆಗಳನ್ನು ಎದುರಿಸಿ ನೇಮಕಗೊಳ್ಳಬಹುದಾಗಿದೆಯೆಂದು ಅಭಿಪ್ರಾಯಪಟ್ಟರು. ಅಂತರ್ಜಾಲದಡಿ ಹಣಕಾಸು ವ್ಯವಹಾರಗಳು ಕ್ಷಣಮಾತ್ರದಲ್ಲಿ ನೆರವೇರುತ್ತಿದ್ದು ಇದರ ಸೂಕ್ಷ್ಮತೆ ಮತ್ತು ಅಪಾಯಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವ ಅಗತ್ಯವಿದೆ ಎಂದು ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಗಣಕ ಯಂತ್ರ ಮತ್ತು ಕಂಪ್ಯೂಟರ್ ಬಳಸುವ ಪ್ರಾಥಮಿಕ ಜ್ಞಾನ ಮಗ್ಗಿ ಮತ್ತು ಗಣಿತದ ಮೂಲ ಕಲ್ಪನೆಯಿಂದ ಹೊರತಾಗಿರದೆಂದು ಅವರು ಜ್ಞಾಪಿಸಿದರು. ಪ್ರಾರಂಭದಲ್ಲಿ ವಿಜ್ಞಾನ ಸಂಘದ ಸಂಚಾಲಕ ಕಿರಣ ಪ್ರಭು ಸ್ವಾಗತಿಸಿದರು. ಶಿಕ್ಷಕ ಎಸ್.ಪಿ.ಪೈ ನಿರೂಪಿಸಿದರು. ಗಣಿತ ಸಂಘದ ಸಂಚಾಲಕ ಅನಿಲ್ ರೊಡ್ರಗೀಸ್ ವಂದಿಸಿದರು.