ಸಿದ್ದಾಪುರ : ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರಮಠ, ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಾವಿರ ಗೋವುಗಳ ಆಶ್ರಯತಾಣವಾದ ಗೋಸ್ವರ್ಗದಲ್ಲಿ(ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಸಮೀಪದ ಶ್ರೀರಾಮದೇವ ಭಾನ್ಕುಳಿಮಠದಲ್ಲಿ) ಪ್ರತಿ ವರ್ಷ ಸಂಕ್ರಾಂತಿಯನ್ನು ಗೋದಿನವಾಗಿ ಆಚರಿಸಲಾಗುತ್ತಿದೆ. ಅದರಂತೆ ಈ ವರ್ಷ 14.01.2021 ರಿಂದ 17.01.2021 ರವರೆಗೆ ಗೋದಿನ ಮತ್ತು ಆಲೆಮನೆ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಗೋದಿನ ಸಮಿತಿ ಅಧ್ಯಕ್ಷ ಎಂ ಜಿ ರಾಮಚಂದ್ರ ಮರಡುಮನೆ ತಿಳಿಸಿದರು.
ಗೋಸ್ವರ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜ.14ರಂದು ಸಂಕ್ರಾಂತಿಯ ದಿನದಂದು ಗೋವುಗಳನ್ನು ಸಿಂಗರಿಸಿ, ಪೂಜಿಸಿ, ವಿಶೇಷ ಭಕ್ಷ್ಯಗಳಿಂದ ಸಂತರ್ಪಣೆ, ಜ. 15ರಂದು ಮಲೆನಾಡುಗಿಡ್ಡ ಗೋತಳಿಗಳನ್ನು ಉಳಿಸುವ ಕುರಿತಾದ ವಿಶೇಷ ಗೋಷ್ಠಿಗಳು, ಜ. 16ರಂದು ವಿದ್ಯಾರ್ಥಿಗಳ ಸಮಾವೇಶ, ಜ. 17ರಂದು ಮಾತೃತ್ವಂ ಸಮಾವೇಶ, ಮಾತೆಯರ ಮಾತೆಗೆ ಮಾತೆಯರಿಂದ ಸೇವಾಕಾರ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಕೃಷಿ ಬದುಕು ದೂರವಾಗಿ ಯಾಂತ್ರೀಕೃತ ಬದುಕಿನಲ್ಲಿ ಸಾಗುತ್ತಿರುವ ಜನರಿಗೆ ಮತ್ತೆ ಹಿಂದಿನ ಸಂಪ್ರದಾಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗೋಸ್ವರ್ಗದಲ್ಲಿ ಸಂಕ್ರಾಂತಿ ಸಮಯ ಗೋದಿನ ಮತ್ತು ಆಲೆಮನೆ ಹಬ್ಬವನ್ನು ನಾಲ್ಕು ದಿನಗಳ ಕಾಲ ವಿಶೇಷವಾಗಿ ಆಚರಿಸಲಾಗುತ್ತದೆ. ಜನಮಾನಸದಿಂದ ದೂರವಾಗುತ್ತಿರುವ ಸಾಂಪ್ರದಾಯಿಕ ‘ಆಲೆಮನೆ’ ನಿರ್ಮಿಸಿ, ಕಬ್ಬಿನ ಹಾಲು ತೆಗೆದು ಬೆಲ್ಲವನ್ನು ಕೂಡಾ ಮಾಡಲಾಗುತ್ತಿದೆ. ಜನಸಾಮಾನ್ಯರು ಇದರಲ್ಲಿ ಭಾಗವಹಿಸಿ ಗೋಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಗೋದಿನ ಸಮಿತಿ ಗೌರವಾಧ್ಯಕ್ಷ ಆರ್ ಎಸ್ ಹೆಗಡೆ ಹರ್ಗಿ ಹೇಳಿದರು.
ಸಂಕ್ರಾಂತಿ ಪರ್ವಕಾಲ:
ರೈತರು ವರ್ಷಪೂರ್ತಿ ಹಾಕುವ ಶ್ರಮದ ಫಲವಾಗಿ ಹೊಲಗದ್ದೆಗಳಲ್ಲಿ ಬೆಳೆದ ಬೆಳೆ, ಫಸಲಾಗಿ ದವಸ ಧಾನ್ಯಗಳು ಮನೆ ಸೇರಿ ಸಡಗರದಿಂದ ಕೂಡಿದ ಸುಗ್ಗಿಕಾಲ ಸಂಕ್ರಾಂತಿ. ಹೊಲಗಳಲ್ಲಿ ರೈತರ ಜತೆಗೆ ದುಡಿಯುವ ಎತ್ತುಗಳಿಗೂ ವಿಶ್ರಾಂತಿ ಲಭಿಸುವ ಸಮಯ ಇದೇ ಸಂಕ್ರಾಂತಿ.
ಸುಗ್ಗಿ ಸಂಕ್ರಾಂತಿಯಲ್ಲಿ ಗೋವುಗಳಿಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಹಸು,ಕರು, ಎತ್ತುಗಳಿಗೆ ಸ್ನಾನ ಮಾಡಿಸಿ ಅಲಂಕಾರ ಮಾಡಿ ಪೂಜೆ ಮಾಡುವ ಜತೆಗೆ ಧಾನ್ಯರಾಶಿಗೆ ಪೂಜೆ, ಕೃಷಿ ಸಲಕರಣೆಗಳ ಪೂಜೆಯೂ ಸಂಕ್ರಾಂತಿಯಂದು ವಿಶೇಷವಾಗಿರುತ್ತದೆ. ಸೂರ್ಯನು ಇದೇ ದಿನ ತನ್ನ ಪಥವನ್ನು ಬದಲಿಸುವ ಕಾರಣದಿಂದ ಪ್ರಕೃತಿಯಲ್ಲೂ ಬದಲಾವಣೆಯನ್ನು ಕಾಣಬಹುದಾಗಿದೆ.
ಗೋವಿಗೆ ವಿಶ್ರಾಂತಿ ನೀಡುವ ಪರ್ವದಂದು ಪ್ರತೀವರ್ಷ ಶ್ರೀಮಠದಲ್ಲಿ ಹರ್ಷದ ಸಮಯ, ಅದೇ ಸಂಕ್ರಾಂತಿ ಗೋದಿನ. ಈ ವರ್ಷದ ಹರ್ಷದಲ್ಲಿ ನಮ್ಮೊಡನೆ ಸಾರ್ವಜನಿಕರು ಭಾಗಿಯಾಗಲೆಂದು ಶ್ರೀಮಠದ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಗೋದಿನ ಸಮಿತಿ ಗೌರವಾಧ್ಯಕ್ಷ ಆರ್ ಎಸ್ ಹೆಗಡೆ ಹರ್ಗಿ, ಅಧ್ಯಕ್ಷ ಎಂ ಜಿ ರಾಮಚಂದ್ರ ಮರಡುಮನೆ, ಗೋಸ್ವರ್ಗ ಸಂಗ್ರಹ ಪ್ರಮುಖ ಗಣಪತಿ ಹೆಗಡೆ ಮೂಗಿಮನೆ, ಗೋದಿನ ಸಮಿತಿ ಉಪಾಧ್ಯಕ್ಷ ಎಂ ಎಂ ಹೆಗಡೆ ಮಗೇಗಾರು, ಕೋಶಾಧ್ಯಕ್ಷೆ ವೀಣಾ ಭಟ್, ಪ್ರಧಾನಕಾರ್ಯದರ್ಶಿ ಮಧು ಜಿ ಕೆ, ಸಂಚಾಲಕ ಡಾ. ರವಿ, ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ ಉಪಸ್ಥಿತರಿದ್ದರು.