ಭಟ್ಕಳ : ಮುಗಳಿಕೋಣೆ ಗೋಪಾಲಕೃಷ್ಣ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು.
ಮುಂಜಾನೆ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಗಣಹೋಮ, ಕಲಾಭಿವೃದ್ಧಿಹೋಮ ಹಾಗೂ ಕುಂಬಾಭಿಷೇಕ ನಡೆಯಿತು. ಮದ್ಯಾಹ್ನ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸದರು. ಸಾಯಂಕಾಲ ಅಯ್ಯಪ್ಪ ಸ್ವಾಮಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು. ದೇವಾಲಯದಿಂದ ಹೊರಟ ಅಯ್ಯಪ್ಪ ಸ್ವಾಮಿಯ ಮೆರವಣಿಗೆಯು ಪದ್ಮಾವತಿ ದೇವಸ್ಥಾನದ ಮೂಲಕ ಕಳಿ ಹನುಮಂತ ದೇವಸ್ಥಾನದ ಮಾರ್ಗವಾಗಿ ಹಳೆ ಬಸ್ ನಿಲ್ದಾಣ ತಲುಪಿ ಅಲ್ಲಿಂದ ಮುಖ್ಯರಸ್ತೆಯ ಮೂಲಕ ಸೋನಾರಕೇರಿ ತಲುಪಿ ಅಲ್ಲಿಂದ ನಿಚ್ಚಲಮಕ್ಕಿ ತಿರುಮಲವೆಂಕಟರಮಣ ದೇವಾಲಯದ ಮೂಲಕ ವಿ.ಟಿ.ರಸ್ತೆಯ ಮಹಾಕಾಳಿ ದೇವಸ್ಥಾನದ ವರೆಗೆ ಬಂದು ಅಲ್ಲಿಂದ ಹಿಂದಿರುಗಿ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯ ತಲುಪಿತು. ಅಲ್ಲಿಂದ ಸೊನಾರ ಕೇರಿ, ಮುಖ್ಯರಸ್ತೆಯ ಮೂಲಕ ಕಳಿಹನುಮಂತ ದೇವಸ್ಥಾನದ ಮಾರ್ಗವಾಗಿ ಗೋಪಾಲಕೃಷ್ಣ ರಸ್ತೆಯನ್ನು ಪ್ರವೇಶಿಸಿ ಅಯ್ಯಪ್ಪ ಸ್ವಾಮಿ ಮಂದಿರಕ್ಕೆ ಪಲ್ಲಕ್ಕಿಯ ಮೆರವಣಿಗೆ ಹಿಂದಿರುಗಿತು. ಮಾರ್ಗ ಮದ್ಯದಲ್ಲಿ ನೂರಾರು ಭಕ್ತರು ಅಯ್ಯಪ್ಪ ಸ್ವಾಮಿಗೆ ಹಣ್ಣುಕಾಯಿ ಸಮರ್ಪಿಸಿದರು. ಪಲ್ಲಕ್ಕಿಯ ಮೆರವಣಿಗೆಯಲ್ಲಿ ಮಾರುತಿ ಗುರುಸ್ವಾಮಿ, ಮಂಜಪ್ಪ ಸ್ವಾಮಿ, ಅಯ್ಯಪ್ಪ ಸ್ವಾಮಿ ವೃತಧಾರಿಗಳು, ಎಂ.ಎಸ್ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ಸೋಮೇಶ್ವರ ನಾಯ್ಕ, ವಸಂತ ಕುಲಾಲ್, ದಿನೇಶ ನಾಯ್ಕ, ಗುರು ಸಾಣಿಕಟ್ಟೆ, ನಾಗೇಶ್ ನಾಯ್ಕ, ಗಂಗಾಧರ ನಾಯ್ಕ, ಶನಿಯಾರ ನಾಯ್ಕ, ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಜೈ ಮಾರುತಿ ಚಂಡೆ ವಾದ್ಯವು ಉತ್ಸವದ ಮೆರವಣಿಗೆಗೆ ರಂಗನ್ನು ನೀಡಿತ್ತು.
ಇದೇ ಸಂದರ್ಭದಲ್ಲಿ ಶಬರಿಮಲೆಗೆ ಮುವತ್ತಾರನೇ ವರ್ಷದ ಯಾತ್ರೆಗೆ ಹೊರಟ ಮಂಜಪ್ಪ ಸ್ವಾಮಿ ತೆಂಗಿನಗುಂಡಿ ಹಾಗೂ ೧೮ ನೇ ವರ್ಷದ ಯಾತ್ರೆಗೆ ಹೊರಟಿರುವ ರಾಮ ಸ್ವಾಮಿ ಕರಿಕಲ್ ಇವರಿಗೆ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಪರವಾಗಿ ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸಲಾಯಿತು.