ಭಟ್ಕಳ : ಮಕರ ಸಂಕ್ರಾಂತಿಯ ಪುಣ್ಯಕಾಲದಲ್ಲಿ ಭಟ್ಕಳದ ಮುಗಳಿಕೋಣೆ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ಮಾರುತಿ ಗುರುಸ್ವಾಮಿಯವರ ನೇತ್ರತ್ವದಲ್ಲಿ ಮಕರ ವಿಳಕ್ಕು ವಿಶೇಷ ಪೂಜೆ ನಡೆಯಿತು. ಮುಂಜಾನೆ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಸಲಾಯಿತು.ಸಾಯಂಕಾಲ ಶಬರಿಮಲೆಯಲ್ಲಿ ಅಯ್ಯಪ್ಪನ ಸನ್ನಿಧಿಯಲ್ಲಿ ಜ್ಯೋತಿ ದರ್ಶನದ ಹಿನ್ನೆಲೆಯಲ್ಲಿ ಮಕರವಿಳಕ್ಕು ಪೂಜೆಯನ್ನು ಅಯ್ಯಪ್ಪ ಸ್ವಾಮಿಗೆ ಸಲ್ಲಿಸಲಾಯಿತು. ಪೂಜೆಯ ನಂತರ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ತದ ನಂತರದಲ್ಲಿ ಅಯ್ಯಪ್ಪ ಸ್ವಾಮಿಗೆ ಭಕ್ತಾದಿಗಳು ಸಲ್ಲಿಸುವ ತುಪ್ಪದ ಕಾಯಿ ತುಂಬಲಾಯಿತು. ಹಾಗೆಯೇ ಶರಾಉ ಘೋಷದೊಂದಿಗೆ ಶಬರಿಮಲೆಗೆ ತೆರಳುವ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟಲಾಯಿತು. ಇದೇ ಸಂದರ್ಭದಲ್ಲಿ ಸನ್ನಿಧಾನದ ಗುರುಸ್ವಾಮಿಗಳಾದ ಮಾರುತಿ ಗುರುಸ್ವಾಮಿಯವರಿಗೆ ಶಬರೀ ಸ್ವೀಟ್ಸ ನ ಮಾದೇವ ನಾಯ್ಕ ದಂಪತಿಗಳು ಸನ್ಮಾನಿಸಿದರು. ಹಾಗೆಯೇ ಶಬರಿಮಲೆಗೆ ೩೬ ನೇ ವರ್ಷದ ಯಾತ್ರೆಗೆ ಹೊರಟಿರುವ ಮಂಜಪ್ಪ ಸ್ವಾಮಿಯವರಿಗೆ ತೆಂಗಿನಗುಂಡಿ ನಾಮಧಾರಿ ಸಮಾಜದ ವತಿಯಿಂದ, ಅಳಿಯಂದಿರು ಮಗಳ ಕುಟುಂಬದವರು ಹಾಗೂ ಶಬರಿ ಸ್ವೀಟ್ಸನ ಮಾದೇವ ನಾಯ್ಕ ದಂಪತಿಗಳು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಬದಲ್ಲಿ ತೆಂಗಿನಗುಂಡಿಯ ನಾಮಧಾರಿ ಸಮಾಜದ ಮುಖ್ಯಸ್ಥರಾದ ಕುಪ್ಪ ನಾಯ್ಕ, ಪ್ರಕಾಶ ನಾಯ್ಕ, ರಾಜು ನಾಯ್ಕ, ವೆಂಕಟರಮಣ ನಾಯ್ಕ, ಗಜೇಂದ್ರ ನಾಯ್ಕ, ನಾಗೇಶ ನಾಯ್ಕ , ಗುರು ಸಾಣಿಕಟ್ಟೆ,ದಿನೇಶ ನಾಯ್ಕ, ಸೋಮೇಶ್ವರ ನಾಯ್ಕ, ಶೇಖರ ನಾಯ್ಕ, ಗಣೇಶ ನಾಯಕ, ಸಂಜೀವ, ಮಾದೇವ ನಾಯ್ಕ ಶಬರಿ ಹಾಗೂ ಅಯ್ಯಪ್ಪ ಸ್ವಾಮಿ ವೃತಧಾರಿಗಳು, ಹಾಗೂ ಭಕ್ತಾದಿಗಳು ಹಾಜರಿದ್ದರು. ಮಕರ ವಿಳಕ್ಕು ಪೂಜೆಯ ಅಂಗವಾಗಿ ಶಬರಿಮಲೆಯ ಜ್ಯೋತಿ ದರ್ಶನದ ನೇರ ಪ್ರಸಾರ ವೀಕ್ಷಣೆಯ ವ್ಯವಸ್ಥೆಯನ್ನೂ ಕೂಡ ಮಾಡಿದ್ದು ವಿಶೇಷವಾಗಿತ್ತು.