ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಂಗಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೊಲನಗದ್ದೆಯ ಶ್ರೀ ಎಂ.ಎಂ.ಹೆಗಡೆಯವರು ಸಂಸ್ಥೆಯಲ್ಲಿ ಕಲಿಯುತ್ತಿರುವ ಬಡವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಶಿಷ್ಯವೇತನಕ್ಕಾಗಿ ದತ್ತಿ ನಿಧಿ ಸ್ಥಾಪಿಸಲು 1,01,001 ರೂ(ಒಂದು ಲಕ್ಷದ ಒಂದು ಸಾವಿರದ ಒಂದು ರೂಪಾಯಿಗಳ) ದೇಣ ಗೆ ನೀಡಿದ್ದಾರೆ.
ಕೊಂಕಣ ಎಜ್ಯುಕೇಶನ್ ನ ಅಂಗ ಸಂಸ್ಥೆಯ ನಿಕಟಪೂರ್ವ ಮುಖ್ಯಶಿಕ್ಷಕರಾಗಿದ್ದ ಶ್ರೀಯುತ ಎಂ.ಎಂ.ಹೆಗಡೆಯವರು ಸಂಸ್ಥೆಗಾಗಿ ಅನೇಕ ವರ್ಷ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಯ ಈಗಿನ ಸಾಧನೆಗಳಿಗೆ ಭದ್ರವಾದ ತಳಪಾಯ ಹಾಕಿಕೊಟ್ಟವರು.ಇದೀಗ ಅವರು ಸಂಸ್ಥೆಯ ಜೊತೆಗೆ ಪ್ರತೀ ಕಾರ್ಯದಲ್ಲಿಯೂ ಜೊತೆಯಾಗಿ ಬರುತ್ತಿದ್ದಾರೆ. ಇಡೀ ವಿಶ್ವವೇ ಕೊರೋನಾ ಸಂಕಷ್ಟದಲ್ಲಿ ಇರುವಾಗಲೂ ಕೊಂಕಣ ಎಜ್ಯುಕೇಶನ ಟ್ರಸ್ಟ್ ನ ತನ್ನ ಎಲ್ಲಾ ಶಿಕ್ಷಕ ಹಾಗು ಶಿಕ್ಷಕೇತರ ಸಿಬ್ಬಂಧಿಗಳಿಗೆ ಪೂರ್ಣ ಪ್ರಮಾಣದ ವೇತನ ನೀಡಿದ್ದರ ಬಗ್ಗೆ ಶ್ರೀಯುತ ಎಂ.ಎಂ.ಹೆಗಡೆಯವರು. ಸಂತಸ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕಾರ್ಯ ಸಂಸ್ಥೆಯ ಘನತೆ ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಸ್ಥೆಯ ಘನ ಕಾರ್ಯಗಳ ಜೊತೆಗೆ ತಾನೂ ಬೆಂಬಲ ನೀಡುವ ಉದ್ದೇಶದೊಂದಿಗೆ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ದಿಸೆಯಲ್ಲಿ ದತ್ತಿ ನಿಧಿ ಸ್ಥಾಪನೆಗೆ ಅವರು ಆರ್ಥಿಕವಾಗಿ ನೆರವು ನೀಡಿದ್ದಾರೆ. ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀದರ ಪ್ರಭು ಅವರಿಗೆ ಚೆಕ್ ಹಸ್ತಾಂತರಿಸಿದ ಅವರು ಸಂಸ್ಥೆಗೆ ಶ್ರೇಯಸ್ಸಾಗಲಿ ಎಂದು ಹಾರೈಸಿದರು.
ಶ್ರೀಯುತ ಎಂ.ಎಂ.ಹೆಗಡೆಯವರ ಕೊಡುಗೆಯನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿದ ಕೊಂಕಣ ಎಜ್ಯುಕೇಶನ ಟ್ರಸ್ಟನ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಅವರಿಗೆ ಪ್ರೀತಿಪೂರ್ವಕವಾಗಿ ಅಭಿವಂದನೆ ಸಲ್ಲಿಸಿದ್ದಾರೆ.