ಶಿರಸಿ: ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂಲತಃ ಸಿದ್ದಾಪುರ ತಾಲೂಕಿನ ಐನಕೈನ ನಿರಂಜನ ಆರ್.ಭಟ್ಟ ಅವರಿಗೆ ಬೆಂಗಳೂರಿನ ಎಸ್‍ಜಿಎಸ್ ವಾಗ್ದೇವಿ ಸೆಂಟರ್ ಫಾರ್ ರಿಹ್ಯಾಬಿಲಿಟೇಶನ್ ಇಂಪೇರ್ಡವತಿಯಿಂದ ನೀಡಲಾಗುವ ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.
ಹುಟ್ಟಿನಿಂದ ಶ್ರವಣ ದೋಷ ಹೊಂದಿದ್ದ ನಿರಂಜನ್ ಮೈಸೂರಿನ ರೋಟರಿ ಶ್ರವಣದೋಷವುಳ್ಳ ಮಕ್ಕಳ, ತಾಯಂದಿರ ಶಾಲೆಯಲ್ಲಿ ಮಾತು ಕಲಿತಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.79, ಪಿಯುಸಿಯಲ್ಲಿ ಶೇ.83 ಹಾಗೂ ಜೆಇಇ ಮುಖ್ಯ ಪರೀಕ್ಷೆಯಲ್ಲಿ ದೇಶಕ್ಕೆ 307ನೇ ರ್ಯಾಂಕ್ ಪಡೆದಿದ್ದನು. ಪ್ರಸ್ತುತ ಸುರತ್ಕಲ್ ಎನ್‍ಐಟಿಕೆಯಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ಎಂಜನೀಯರಿಂಗ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿ. ನಿರಂಜನ ಭಟ್ಟ ಬೆಂಗಳೂರಿನ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಹಾಗೂ ದೀಪಾ ಭಟ್ಟ ಅವರ ದ್ವಿತೀಯ ಪುತ್ರ.
ಜ.26ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಸಮಾರಂಭದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಸಚಿವ ಸುರೇಶಕುಮಾರ ಇತರರು ಪಾಲ್ಗೊಳ್ಳಲಿದ್ದಾರೆ.