ಕಾರವಾರ: ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ ಸ್ಥಾನಕ್ಕೆ ವರ್ಗವಾರು ಮೀಸಲಾತಿ ಪ್ರಕಟವಾಗಿದ್ದು, ಅದರಂತೆ ಆಯಾ ತಾಲೂಕಿಗೆ ಭೇಟಿ ಮಾಡಿ ಆಯ್ಕೆಯಾದ ಸದಸ್ಯರ ಸಕ್ಷಮದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದು. ಜ.23 ರಂದು ಶಿರಸಿ, ಸಿದ್ದಾಪುರ, ಜ.25 ರಂದು ಕಾರವಾರ, ಜ.27 ರಂದು ಯಲ್ಲಾಪುರ, ಮುಂಡಗೋಡ, ಜ.28 ರಂದು ಹಳಿಯಾಳ, ದಾಂಡೇಲಿ, ಜೋಯಿಡಾ, ಜ.29 ರಂದು ಭಟ್ಕಳ, ಹೊನ್ನಾವರ ಹಾಗೂ ಜ.30 ರಂದು ಕುಮಟಾ ಮತ್ತು ಅಂಕೋಲಾದಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ನೂತನ ಸದಸ್ಯರ ಸಮಕ್ಷಮದಲ್ಲಿ ಚುನಾವಣಾ ಆಯೋಗ ನಿರ್ದೇಶಿಸಿದ ಸಾಫ್ಟ್‍ವೇರ್ ಬಳಸಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು. ಸಾಫ್ಟ್‍ವೇರ್‍ನಲ್ಲಿಯೇ ಲಾಟರಿ ಎತ್ತಲು ತಿಳಿಸಿದ ಪ್ರಕರಣಗಳಲ್ಲಿ ಗ್ರಾಪಂ ಸದಸ್ಯರ ಎದುರಲ್ಲಿ ಲಾಟರಿ ಎತ್ತಲಾಗುವದು. ಆದ್ದರಿಂದ ಯಾರೂ ಊಹಾಪೋಹಗಳಿಗೆ ಕಿವಿಗೊಡಬಾರದು. ನಿಗದಿ ಪಡಿಸಿದ ದಿನದಂದು ಆಯಾ ತಾಲೂಕಿನಲ್ಲಿ ಆಯ್ಕೆಯಾದ ಗ್ರಾಪಂ ಸದಸ್ಯರು ಹಾಜರಾಗಲು ತಿಳಿಸಿದ್ದಾರೆ.
ಎಲ್ಲಾ ಇಒ, ಪಿಡಿಒ ಆಯ್ಕೆಯಾದ ಸದಸ್ಯರುಗಳಿಗೆ ತಿಳುವಳಿಕೆಯನ್ನು ನೀಡಿ ಆ ದಿನದಂದು ಸದಸ್ಯರು ಹಾಜರಾಗಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಮತ್ತು ಕೋವಿಡ್ ಮುಂಜಾಗೃತಾ ಕ್ರಮಗಳನ್ನು ತಹಸೀಲ್ದಾರರು ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕೈಗೊಳ್ಳಲು ಸೂಚಿಸಿದ್ದಾರೆ. ಯಾರಾದರೂ ಶಾಂತತೆ ಭಂಗ ಮಾಡಿದ್ದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲಿ ನಡೆಯುತ್ತೆ ಆಯ್ಕೆ ಪ್ರಕ್ರಿಯೆ?: ಶಿರಸಿಯಲ್ಲಿ 23 ಬೆಳಗ್ಗೆ 11 ಗಂಟೆಯಿಂದ ಡಾ.ಅಂಬೇಡ್ಕರ ಭವನ, ಸಿದ್ದಾಪುರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಶಂಕರಮಠ ಸಭಾಭವನ, ಕಾರವಾರ ಜ. 25 ಬೆಳಗ್ಗೆ 11 ಗಂಟೆಯಿಂದ ಜಿಲ್ಲಾ ರಂಗಮಂದಿರ, ಯಲ್ಲಾಪುರ ಜ.27 ಬೆಳಗ್ಗೆ 11 ಗಂಟೆಯಿಂದ ಎಪಿಎಂಸಿ ಯಾರ್ಡ್ ಅಡಕೆ ಭವನ, ಮುಂಡಗೋಡ ಮಧ್ಯಾಹ್ನ 3 ಗಂಟೆಯಿಂದ, ಲೋಯ್ಲಾ ಕೇಂದ್ರಿಯ ವಿದ್ಯಾಲಯ ಕಾಳಗಿನಕೊಪ್ಪದಲ್ಲಿ ಆಯ್ಕೆ ನಡೆಯಲಿದೆ. ಹಳಿಯಾಳ, ದಾಂಡೇಲಿ ಜ. 28 ರಂದು ಬೆಳಗ್ಗೆ 11 ಗಂಟೆಯಿಂದ ಡಾ.ಜಗಜೀವನರಾಮ್ ಭವನ, ಜೋಯಿಡಾದಲ್ಲಿ ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಾಗೂ ಭಟ್ಕಳ ಜ. 29 ರಂದು ಬೆಳಗ್ಗೆ 11 ಗಂಟೆಯಿಂದ ಸೋನಾರಕೇರಿಯ ಕಮಲಾಬಾಯಿ
ರಾಮನಾಥ ಶಾನಭಾಗ ನ್ಯೂ ಇಂಗ್ಲೀಷ್ ಸ್ಕೂಲ್, ಹೊನ್ನಾವರ ಮಧ್ಯಾಹ್ನ 3 ಗಂಟೆಯಿಂದ ಕರ್ಕಿನಾಕಾ ಹವ್ಯಕ ಸಭಾಭವನ, ಕುಮಟಾ ಜ. 30 ಬೆಳಗ್ಗೆ 11 ಗಂಟೆಯಿಂದ ಪುರಭವನ ಹಾಗೂ ಅಂಕೋಲಾ ಮಧ್ಯಾಹ್ನ 3 ಗಂಟೆಯಿಂದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಲಿದೆ.