ಕುಮಟಾ: ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪದ ಪಾನ್ ಅಂಗಡಿಯ ಮಾಲೀಕರೊಬ್ಬರ ಬೈಕ್ ಕಳೆದ ಭಾನುವಾರ ಕಾಣೆಯಾಗಿತ್ತು. ಈ ಬಗ್ಗೆ ಬೈಕ್ ಕಳೆದುಕೊಂಡವರು ಕುಮಟಾದ ಕ್ರೈಂ ಪಿಎಸ್‌ಐ ಸುಧಾ ಅಘನಾಶಿನಿ ಅವರ ಗಮನಕ್ಕೆ ತಂದಿದ್ದರು.
ಇಂದು ಅಂದರೆ ಬೈಕ್ ಕಳ್ಳತನವಾದ ಕೇವಲ 24 ಗಂಟೆಯಲ್ಲಿ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ನಾಪತ್ತೆಯಾದ ಬೈಕ್‌ನ್ನು ಕುಮಟಾ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ನೇತೃತ್ವದ ತಂಡ ಪತ್ತೆ ಹಚ್ಚಿ, ವಾರಸುದಾರರಿಗೆ ಒಪ್ಪಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಬೈಕ್ ಕಳುವಾಗಿರುವ ಬಗ್ಗೆ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಕ್ರೈಂ ಪಿಎಸ್‌ಐ ನೇತೃತ್ವದ ತಂಡ ಎಲ್ಲೆಡೆ ಶೋಧ ಕಾರ್ಯ ನಡೆಸಿತ್ತು. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಕೂಡ ನಡೆಸಿತ್ತು. ಅಲ್ಲದೆ ಅಕ್ಕಪಕ್ಕ ತಾಲೂಕುಗಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಹೊನ್ನಾವರದ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಬೈಕ್ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು 24 ಗಂಟೆಯೊಳಗೆ ವಾರಸುದಾರರಿಗೆ ಬೈಕ್ ತಲುಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಮಹಿಳಾ ಪಿಎಸ್‌ಐ ಆದ ಸುಧಾ ಅವರ ತನಿಖೆಯ ಚಾಣಾಕ್ಷತನಕ್ಕೆ ಇಡೀ ಕುಮಟಾ ಜನತೆ ತಲೆದೂಗುವಂತಾಗಿದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐಯಾದ ಆನಂದಮೂರ್ತಿ, ರವಿ ಗುಡ್ಡಿ ಹಾಗೂ ಸಿಬ್ಬಂದಿ ಸಹಕಾರ ನೀಡಿದ್ದರು.
ಈ ಕಾರ್ಯಾಚರಣೆ ಜನರಲ್ಲಿ ಪೊಲೀಸರ ಕುರಿತಾಗಿ ಗೌರವ ಮೂಡಿಸಿದ್ದು ಅವರ ಚಾಣಾಕ್ಷ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.