ಅಂಕೋಲಾ : ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುವುದು ಸಹಜ. ಆಹಾರವನ್ನು ಹುಡುಕುತ್ತಾ ಚಿರತೆಯೊಂದು ಮನೆಗೆ ಬಂದ ಘಟನೆ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎನ್ನುವವರ ಮನೆಗೆ ಆಹಾರ ಅರಸಿಬಂದ ಚಿರತೆ, ಮನೆಯ ಬಳಿ ಇದ್ದ ನಾಯಿ ಹಿಡಿಯುವ ಪ್ರಯತ್ನ ಮಾಡಿದ ದೃಷ್ಯ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದೆ.
ಆದ್ರೆ ಚಾಲಾಕಿ ನಾಯಿ ಚಿರತೆ ಬಾಯಿಯಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಬೆಳಗಿನ ಜಾವದಲ್ಲಿಯೇ ಈ ಘಟನೆ ನಡೆದಿದೆ. ನಾಯಿ ತಪ್ಪಿಸಿಕೊಂಡ ನಂತರ ಮನೆಯಲ್ಲಿದ್ದ ಕೋಳಿ ಗೂಡು ಕಾಣಿಸಿದ್ದು ಗೂಡಿನ ಒಳಕ್ಕೆ ಬಾಯಿ ಹಾಕಿ ಕೋಳಿಯನ್ನು ಎಗರಿಸಿ ಚಿರತೆ ಪರಾರಿಯಾಗಿದೆ.
ಯಾವುದೋ ಕಳ್ಳ ಕೋಳಿ ಕದ್ದಿರಬಹುದು ಎಂದು ಮನೆಯವರು ಊಹಿಸಿ, ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ನೋಡಿದಾಗ ಬೆಚ್ಚಿಬಿದ್ದಿದ್ದಾರೆ.
ಊರಿನಲ್ಲಿ ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದು, ಜನತೆ ಚಿರತೆಯ ಭಯದಲ್ಲಿ ಬದುಕುವಂತಾಗಿದೆ.