ಕುಮಟಾ : ತಾಲೂಕಿನ ಹೊಲನಗದ್ದೆಯಲ್ಲಿರುವ ಸಿ.ಆರ್.ಸಿ.ಕಟ್ಟಡಕ್ಕೆ ಹೊಸ ರೂಪ ನೀಡಲಾಗಿದೆ. ಬಣ್ಣ ಕಳೆದುಕೊಂಡು ಮಸುಕಾದ ಕಟ್ಟಡವೀಗ ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡಿದೆ. ಹೊರ ಆವರಣದ ಗೋಡೆಗಳು ನಮ್ಮ ಗ್ರಾಮೀಣ ಸೊಗಡಿನ ವರ್ಲಿ ಚಿತ್ರಗಳಿಂದ ಸುಂದರವಾಗಿ ಕಂಗೊಳಿಸುತ್ತಿದೆ. ಒಳ ಗೋಡೆಗಳು ನಮ್ಮ ದೇಶದ ಮಹಾಪುರುಷರ ಚಿತ್ರ ಹಾಗೂ ಕನ್ನಡ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳನ್ನು ಹೊಂದಿದ್ದು ಇದರ ಜೊತೆಗೆ ಕ್ಲಸ್ಟರ್ ನ ಆವಶ್ಯಕ ಮಾಹಿತಿಗಳನ್ನು ಒಳಗೊಂಡಿದೆ.
ಕಟ್ಟಡದ ಸುರಕ್ಷಿತತೆಯ ದೃಷ್ಟಿಯಿಂದ ಸ್ಲ್ಯಾಪ್ ಮೇಲೆ ಹಂಚಿನ ಹೊದಿಕೆ ಅಳವಡಿಸಲಾಗಿದೆ.
ಒಟ್ಟಿನಲ್ಲಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ತಮ್ಮ ಕಾರ್ಯಾಲಯವನ್ನು ಹೇಗೆ ಆಕರ್ಷಣೀಯ ಕೇಂದ್ರವನ್ನಾಗಿ ಪರಿವರ್ತಿಸಬಲ್ಲರು ಎಂಬುದಕ್ಕೆ ಹೊಲನಗದ್ದೆ ಸಿ.ಆರ್.ಸಿ.ಕಟ್ಟಡ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಕಳೆದ ಮೂರು ವರ್ಷಗಳಿಂದ ಸಿ.ಆರ್.ಪಿ.ಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ ನಾಯಕ ರವರು ತಮ್ಮ ಸಕಾರಾತ್ಮಕ ನಿರ್ಧಾರದಿಂದ ಈ ಬದಲಾವಣೆಗೆ ಕಾರಣರಾಗಿದ್ದಾರೆ. ಅವರ ಈ ಕಾರ್ಯಕ್ಕೆ ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.