ಭಟ್ಕಳ : ಶಿಕ್ಷಣ ಪಡೆಯುವ ಹಂತದಲ್ಲಿ ಕಲಿಕೆಯ ಪ್ರಕ್ರಿಯೆಯನ್ನು ಆನಂದಿಸಿದಾಗ ಯಶಸ್ಸು ಗಳಿಸಲು ಸಾಧ್ಯ. ಓದಿನ ಜೊತೆಗೆ ಮನಸನ್ನು ಅರಳಿಸುವ ಹವ್ಯಾಸಗಳನ್ನು ಗಳಿಸಿಕೊಳ್ಳಬೇಕು ಮತ್ತು ಪ್ರತಿದಿನ ಹೊಸತನ್ನು ಕಲಿಯುವ ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡು ಜ್ಞಾನವಂತರಾಗಿ ಸಮಾಜಕ್ಕೆ ಕೊಡುಗೆಗಳನ್ನು ನೀಡುವ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಸ್ಪಂದನ ಸಾಮಾಜಿಕ ಶೈಕ್ಷಣ ಕ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ನುಡಿದರು. ಅವರು ಸ್ಪಂದನ ಸಂಸ್ಥೆಯಿಂದ ಪ.ಪೂ. ಹಂತದಲ್ಲಿ ಸಾಧನೆ ಮಾಡಿ ವೃತ್ತಿಪರ ಸಂಸ್ಥೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ ವಿಧ್ಯಾರ್ಥಿಗಳು ಶಿಕ್ಷಿತರಾಗುವ ಜೊತೆಗೆ ಸಂಸ್ಕಾರವಂತರಾಗುವುದೂ ಕೂಡ ಇಂದಿನ ಅಗತ್ಯ. ಶಿಕ್ಷಣ ಪಡೆದು ಉನ್ನತ ಹಂತವನ್ನು ತಲುಪಿದ ನಂತರ ತಂದೆ ತಾಯಿ,ಕುಟುಂಬವರ್ಗದವರ ತ್ಯಾಗ, ವಿದ್ಯೆ ಕಲಿತ ಶಿಕ್ಷಣ ಸಂಸ್ಥೆ ಜೊತೆಗೆ ಬೆಳೆಸಿದ ಸಮಾಜದ ಕೊಡುಗೆಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ನುಡಿದರಲ್ಲದೇ ಸ್ಪಂದನ ಸಂಸ್ಥೆಯು ಆಯೋಜಿಸಿಕೊಂಡು ಬರುತ್ತಿರುವ ಸಮಾಜಮುಖಿ ಶೈಕ್ಷಣ ಕ, ಸಾಮಾಜಿಕ ಸೇವಾ ಕಾರ್ಯಗಳು ನಿಜಕ್ಕೂ ಅಭಿನಂದನಾರ್ಹ ಎಂದು ನುಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹೆಸ್ಕಾಂನ ಅಭಿಯಂತರ ಹಾಗೂ ಸ್ಪಂದನದ ಸದಸ್ಯರಾದ ಶಿವಾನಂದ ನಾಯ್ಕ ಮಾತನಾಡಿ ಯಶಸ್ಸಿನೊಂದಿಗೆ ಸೋಲನ್ನೂ ನಿರ್ವಹಿಸುವ ಜೀವನ ಕಲೆಯನ್ನು ಕಲಿತುಕೊಳ್ಳಬೇಕಿದೆ. ಯಶಸ್ಸಿನ ಹಾದಿಯಲ್ಲಿ ಬರುವ ಸೋಲುಗಳಿಗೆ ಕುಗ್ಗದೇ ಸೋಲನ್ನೂ ನಿರ್ವಹಿಸುವ ಕಲೆಯನ್ನು ಕರಗತಮಾಡಿಕೊಳ್ಳಬೇಕು ಎಂದು ಬಹುಮುಖೀ ಚಿಂತನೆಯ ಮೂಲಕ ವಿಶ್ವವೇ ಬೆರಗುಗೊಳ್ಳುವಂತಹಾ ಸಾಧನೆ ಮಾಡಿದ ಸಾಧಕರ ದೃಷ್ಟಾಂತಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಪಸ್ಥಿತರಿದ್ದ ಡಾ. ಮೇಘಾ ನಾಯ್ಕ ಸ್ಪಂದನ ಸಂಸ್ಥೆಯಿಂದ ಸನ್ಮಾನ ಸ್ವಿಕರಿಸಿ ಮಾತನಾಡಿ ಗುರಿಯನ್ನು ಕಣ್ಮುಂದಿಟ್ಟುಕೊಂಡು ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಕರೆ ನೀಡಿ ಪ್ತಿಭೆಗಲನ್ನು ಪೋಷಿಸಿ ಪುರಸ್ಕರಿಸುವ ಸ್ಪಂದನ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಹಂತದಲ್ಲಿ ಉತ್ತಮ ಸಾಧನೆ ಮಾಡಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ನ್ಯೂ ಇಂಗ್ಲೀಷ್ ಪ.ಪೂ. ಕಾಲೇಜಿನ ವಿಧ್ಯಾರ್ಥಿನಿ ಧನಲಕ್ಷ್ಮೀ ಮೊಗೇರ, ಭಟ್ಕಳದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಐಐಟಿ ಹೈದರಾಬಾದ್ ಗೆ ಆಯ್ಕೆಯಾದ ಸಿದ್ಧಾರ್ಥ ಶೀಕ್ಷಣ ಸಂಸ್ಥೆಯ ಅಭಿಷೇಕ್ ವಾಸು ನಾಯ್ಕ, ವಿಐಟಿಗೆ ಆಯ್ಕೆಯಾದ ಅಭಿಷೇಕ ಎನ್.ಎನ್., ಎನ್.ಐ.ಟಿ.ಕೆಗೆ ಆಯ್ಕೆಯಾದ ಗಣೇಶ ಗೊಂಡ,ಅರ್.ವಿ.ತಾಂತ್ರಿಕ ಕಾಲೇಜಿಗೆ ಆಯ್ಕೆಯಾದ ಪ್ರಸನ್ನ ನಾಯ್ಕ, ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದ ಆದರ್ಶ ನಾಯ್ಕ, ಸನತ್ ಕುಮಾರ, ಮೆಲ್ರಿಕ್, ಅನನ್ನಯ ನಾಯ್ಕ, ದೀಪಾ ಎಸ್.,ಅಶ್ವಿನಿ ಹಾಗೂ ದರ್ಶನ್ ನಾಯ್ಕ ಮುಂತಾದವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಬೆನ್ನೆಲುಬಾಗಿ ನಿಂತ ಸಿದ್ಧಾರ್ಥ ಸಂಸ್ಥೆಯ ಸಂಸ್ಥೆಯ ಮುಖ್ಯಸ್ಥರಾದ ಅರ್ಚನಾ ಹಾಗೂ ಎಂ.ಕೆ ನಾಯ್ಕ ದಂಪತಿಗಳನ್ನು ಅಭಿನಂದಿಸಿ ಪುರಸ್ಕರಿಸಲಾಯಿತು.
ಪ್ರತಿಭಾ ಪುರಸ್ಕಾರ ವಿಧ್ಯಾರ್ಥಿಗಳು ತಮ್ಮ ಸಾಧನೆಗೆ ಕಾರನರಾದ ಪಾಲಕರು, ಶಿಕ್ಷಣ ಸಂಸ್ಥೆ ಹಾಗೂ ಉಪನ್ಯಾಸಕರ ಕೊಡುಗೆಗನ್ನು ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಪಾಲಕರು ಹಾಗೂ ಸಿದ್ಧಾರ್ಥ ಸಂಸ್ಥೆಯ ಪರವಾಗಿ ಎಂ.ಕೆ.ನಾಯ್ಕ ಮಾತನಾಡಿದರು. ಸ್ಪಂದನ ಸಂಸ್ಥೆಯ ಸದಸ್ಯ ಗಂಗಾಧರ ನಾಯ್ಕ ಪ್ರಾಸ್ಥಾವಿಕ ನುಡಿಗಳನ್ನಾಡಿ ಪ್ರತಿಭಾ ಪುರಸ್ಕಾರವನ್ನು ನಿರ್ವಹಿಸಿದರೆ ಸಂಸ್ಥೆಯ ಉಪಾಧ್ಯಕ್ಷ ಭವಾನಿಶಂಕರ್ ಎಲ್ಲರನ್ನು ಸ್ವಾಗತಿಸಿದರು. ಪಾಂಡುರಂಗ ನಾಯ್ಕ ವಂದಿಸಿದರು. ಕುಮಾರಿ ನೇಹಾ ಪಾಂಡುರಂಗ ನಾಯ್ಕ ಪ್ರಾರ್ಥಿಸಿದರೆ ಶಿಕ್ಷಕ ನಾರಾಯನ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕವೃಂದವರು ಹಾಗೂ ಸ್ಪಂದನ ಸಂಸ್ಥೆಯ ಸದಸ್ಯರಾದ ಭಾಸ್ಕರ ನಾಯ್ಕ, ರಾಜೇಶ ನಾಯ್ಕ, ಕ್ರಿಯಾಶೀಲ ಗೆಳೆಯರ ಬಳಗದ ದೀಪಕ ನಾಯ್ಕ, ಪಾಂಡುರಂಗ ನಾಯ್ಕ ಆಸರಕೇರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.