ಹೊನ್ನಾವರ : ಸರ್ವ ಶಿಕ್ಷಣ ಅಭಿಯಾನದ ಯಶಸ್ಸು ಸಮುದಾಯ ಆಧಾರಿತ ಯೋಜನಾ ಪ್ರಕ್ರಿಯೆಯ ಗುಣಮಟ್ಟವನ್ನು ಅವಲಂಭಿಸಿದೆ ಎಂದು ಸಮನ್ವಯಾಧಿಕಾರಿ ಎಸ್. ಎಂ. ಹೆಗಡೆ ಹೇಳಿದರು. ಇತ್ತೀಚೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಗ್ರಾಣಿಯಲ್ಲಿ ನಡೆದ ಒಂದು ದಿನದ ಎಸ್.ಡಿ.ಎಂ.ಸಿ. ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಶಾಲೆಯ ಕಲ್ಪನೆ ಬದಲಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಅಧಿನಿಯಮ 2009 ರ ಅನ್ವಯ ಶಾಲೆಯನ್ನು ಶಿಶು ಸ್ನೇಹಿ ಕೇಂದ್ರವಾಗಿ ಪರಿವರ್ತಿಸುವುದರ ಜೊತೆಗೆ ಶಾಲೆಯಿಂದ ಹೊರಗುಳಿದ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣಕ್ಕಾಗಿ ಆದ್ಯತೆ ಮತ್ತು ಬದ್ಧತೆಯನ್ನು ಒದಗಿಸುವ ಕೇಂದ್ರವನ್ನಾಗಿ ಪರಿವರ್ತಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಸಮುದಾಯ ಅದರಲ್ಲೂ ವಿಶೇಷವಾಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ತಂದೆ-ತಾಯಿಯರ ಸಕ್ರಿಯ ಭಾಗವಹಿಸುವಿಕೆ ವಿಕೇಂದ್ರಿತ ಶಾಲಾ ಆಡಳಿತದಲ್ಲಿ ನಿಣಾ೯ಯಕ ಪಾತ್ರ ವಹಿಸುತ್ತದೆ. ಈ ಮಹತ್ವದ ಅಂಶವನ್ನು ಪ್ರಾರಂಭದಲ್ಲಿ ಗುರುತಿಸಿರುವ ನಮ್ಮ ಶೈಕ್ಷಣಿಕ ನೀತಿ-ಕಾಯ೯ಕ್ರಮಗಳು ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಗಳನ್ನು ಕೈಗೊಳ್ಳುತ್ತವೆ.ಈ ದಿಶೆಯಲ್ಲಿ ಶಾಲಾ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಸಮುದಾಯ ತೊಡಗಿಸಿಕೊಳ್ಳುವ ಪ್ರಕ್ರಿಯೆಗೆ ಮಾತ್ರ ಸೀಮಿತಗೊಳಿಸದೆ ಗುಣಾತ್ಮಕ ಶಿಕ್ಷಣದ ಸಾವ೯ತ್ರಿಕರಣದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಯೂ ಸಹ ಪರಿಣಾತ್ಮಕ ಮತ್ತು ಗುಣಾತ್ಮಕ ಕಾರ್ಯತಂತ್ರಗಳ ಮೂಲಕ ಸಮುದಾಯ ಒಳಮಾಡಿಕೊಳ್ಳುವ ಪ್ರಯತ್ನವಾಗಿದೆ. ಶಿಕ್ಷಕರು ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಪಾಲಕರಲ್ಲಿ ಜಾಗೃತಿ ಮೂಡಿಸಿ ಗುಣಾತ್ಮಕ ಶಿಕ್ಷಣದತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಪಿ.ಆರ್. ನಾಯ್ಕ ಮಾತನಾಡಿ ನಮ್ಮ ನಡುವಿನ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡಬೇಕು ಎಂದರು.ಶಾಲಾ ಅಭಿವೃದ್ಧಿ ಸಮಿತಿಯ ಏಳು ಕ್ಷೇತ್ರಗಳು ಮತ್ತು ಶೈಕ್ಷಣಿಕ ಯೋಜನೆಯ ಕುರಿತಾದ ಕ್ಷೇತ್ರಗಳ ಬಗ್ಗೆ ಮತ್ತು ಸೂಚಕಗಳ ಬಗ್ಗೆ ವಿವರಿಸಿ ಪ್ರತಿಯೊಬ್ಬರೂ ತಮ್ಮ ಪಾಲಿನ ಜವಾಬ್ದಾರಿ ನಿರ್ವಹಿಸಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಮಾರುತಿ ಗೌಡ ಸಂಪನ್ಮೂಲ ವ್ಯಕ್ತಿಗಳಾದ ಪದ್ಮಾವತಿ ನಾಯ್ಕ, ಮುಖ್ಯಾಧ್ಯಾಪಕಿ, ಸಂಪನ್ಮೂಲ ವ್ಯಕ್ತಿ ಸುಚೇತ ಸಿಂಗನಕುಳಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮುಖ್ಯಾಧ್ಯಾಪಕಿ ಸುಚೇತ ಸಿಂಗನಕುಳಿ ಸ್ವಾಗತಿಸಿದರು. ಕೊನೆಯಲ್ಲಿ ಸಹಶಿಕ್ಷಕಿ ರೂಪಾ ಭಟ್ ವಂದಿಸಿದರು.