ದಾಂಡೇಲಿ: ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ನಿಮಗೆ ವಿದೇಶದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸುತ್ತಿದ್ದ ಆರೋಪಿಯನ್ನು ದಾಂಡೇಲಿ ನಗರದ ಪೆÇಲೀಸರು ಬೆಳಗಾವಿಯಲ್ಲಿ ಇಂದು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ರೋಣದ ಶರಣಬಸಪ್ಪ ಸಂಗನಬಸಪ್ಪ ಬಳಗೇರ (45) ಬಂಧಿತ ಆರೋಪಿ. ಪ್ರಸ್ತುತ ದಾಂಡೇಲಿಯ ಸುಭಾಶ್ ನಗರದಲ್ಲಿ ವಾಸವಿದ್ದ ಆತ, ಮೂವರಿಂದ ಹಣ ಪಡೆದು ವಂಚಿಸಿದ್ದಾಗಿ ಪ್ರಕರಣ ದಾಖಲಾಗಿತ್ತು.
ಟರ್ಕಿ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಾಗೂ ಅಲ್ಲಿಗೆ ತೆರಳಲು ವೀಸಾ ವ್ಯವಸ್ಥೆ ಮಾಡುವುದಾಗಿ ರೂ.2.55 ಲಕ್ಷವನ್ನು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ಆದರೆ, ವೀಸಾ, ನೌಕರಿ ಕೊಡಿಸಲಿಲ್ಲ. ಹಣವನ್ನೂ ಮರಳಿಸಿರಲಿಲ್ಲ. ಈ ಬಗ್ಗೆ ಖಾನಾಪುರದ ನಿಯಾಝ್ ಹಮ್ಮದ್ ಎಂಬುವವರು ದೂರು ನೀಡಿದ್ದರು.
ಆರೋಪಿಯಿರುವ ಜಾಗದ ಮಾಹಿತಿ ಪಡೆದುಕೊಂಡ ದಾಂಡೇಲಿ ಪೋಲೀಸರು ದಾಳಿ ಮಾಡಿ, ಆರೋಪಿಯಿಂದ ಬೇರೆ ಬೇರೆ ಉದ್ಯೋಕಾಂಕ್ಷಿಗಳ 18 ಅಸಲಿ ಪಾಸ್‍ಪೋರ್ಟ್‍ಗಳು, ಮೂರು ಮೊಬೈಲ್ ಪೋನ್‍ಗಳು, ಲ್ಯಾಪ್‍ಟಾಪ್, ಆರು ಎ.ಟಿ.ಎಂ ಕಾರ್ಡ್‍ಗಳು, ಒಂದು ಹಾರ್ಡ್ ಡ್ರೈವ್, ಮೂರು ಪೆನ್ ಡ್ರೈವ್‍ಗಳು, ಏಳು ಸಿಮ್ ಕಾರ್ಡಗಳು, ಏಳು ವಾಚ್‍ಗಳು ಮತ್ತು ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಆತನಿಗೆ ಹಣ ಕೊಟ್ಟು ಮೋಸ ಹೋಗಿರುವವರು ಇದ್ದರೆ ದಾಂಡೇಲಿ ನಗರ ಠಾಣೆಗೆ ಮಾಹಿತಿ ನೀಡಲು ಪೋಲೀಸರು ತಿಳಿಸಿದ್ದಾರೆ.
ಡಿ.ವೈ.ಎಸ್.ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಪ್ರಭು ಆರ್.ಗಂಗನಹಳ್ಳ, ಪಿ.ಎಸ್.ಐ ಮಹಾದೇವಿ ನಾಯ್ಕಕೋಡಿ, ಪಿ.ಎಸ್.ಐ ಯಲ್ಲಪ್ಪ.ಎಸ್, ಪೋಲೀಸ್ ಸಿಬ್ಬಂದಿ ಸೋಮಲಿಂಗ ಖಂಡೇಕರ್, ಪ್ರಶಾಂತ ನಾಯ್ಕ, ಭೀಮಪ್ಪ.ಎಚ್, ಮಂಜುನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.