ಭಟ್ಕಳ- ರವಿವಾರ ಮುರುಡೇಶ್ವರ ಆರ್ಯನ್ ಸಭಾಭವನದಲ್ಲಿ ಆಯೋಜಿಸಲಾದ ನಾಡವರ ಸಂಘ ಭಟ್ಕಳ ಇವರ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಲೇಖಕಿ ರೇಷ್ಮಾ ಉಮೇಶ ಅವರನ್ನು ಸನ್ಮಾನಿಸಲಾಯಿತು.
ಚಿತ್ರಾಪುರದ ಶ್ರೀವಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿರುವ ಲೇಖಕಿ ಕಥೆಗಾತಿ ರೇಷ್ಮಾ ಉಮೇಶ ಅವರ “ಹೊಂಗೆಯ ನೆರಳು” ಕವನ ಸಂಕಲನಕ್ಕೆ ಬಂದ ರಾಜ್ಯ ಮಟ್ಟದ ಸಾಹಿತ್ಯ ಶ್ರೀ ಪ್ರಶಸ್ತಿ ಹಾಗೂ ಜಿಲ್ಲಾ ಕಸಾಪದ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರಗಳನ್ನು ಪರಿಗಣಿಸಿ ಇಂದು ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ ಲೇಖಕಿಯನ್ನು ಸನ್ಮಾನಿಸಿ ಮಾತನಾಡುತ್ತಾ ಸಮಾಜದ ಸಾಹಿತ್ಯ ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಗೌರವಿಸುವ ನಾಡವರ ಸಂಘದ ಕಾರ್ಯ ಪ್ರಶಂಸನೀಯ ಎಂದು ನುಡಿದರು.
ಮುರುಡೇಶ್ವರದ ಉದ್ಯಮಿ ನವೀನ್ ಗಾಂವಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಸ್ತುತ ಮಂಗಳೂರು ಸೈಬರ್ ಕ್ರೈಮ್ ಪೋಲಿಸ್ ಇನ್ಸ್‌ಪೆಕ್ಟರ್ ಸುರೇಶ ನಾಯಕ, ವಸಂತ ನಾಯಕ, ಶಿವಾನಂದ ನಾಯಕ ಶಿಕ್ಷಕಿ ರಾಜಂ ಹಿಚ್ಕಡ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.