ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಪ್ರವಾಹದ ಹೊತ್ತಲ್ಲಿ ಮನೆ ಕಳೆದುಕೊಂಡಿದ್ದ ಹೆಗಡೆಯ ಕಲ್ಕೋಡಿನ ಅಜ್ಜಿ ಮಹಾದೇವಿ ಗೌಡ ಅವರ ಮನೆಯನ್ನು ದಾನಿಗಳ ನೆರವನ್ನು ಪಡೆದು ನಿರ್ಮಿಸಿ ಪ್ರವೇಶವನ್ನು ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನೇತ್ರತ್ವದಲ್ಲಿ ಮಾಡಲಾಯಿತು.
ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ಕಾರ್ಯಕ್ರಮ ಮತ್ತು ಸ್ವಚ್ಛತಾ ಕಾರ್ಯಕ್ರಮದ ಮೂಲಕ ಜನಮನ ಸೆಳೆಯುತ್ತಿದ್ದ ಯುವ ಬ್ರಿಗೇಡ್ ಇದೀಗ ಪ್ರವಾಹದ ಹೊತ್ತಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಬಳಿಯ ಅಜ್ಜಿಯೊಬ್ಬಳಿಗೆ ಮನೆ ನಿರ್ಮಿಸಿಕೊಡುವ ಮೂಲಕ ಮಾದರಿಯಾಗಿದೆ.
ಪ್ರವಾಹದ ಸಂದರ್ಭದಲ್ಲಿ ಮನೆ ಕಳೆದುಕೊಂಡಿದ್ದ ಆಕೆಯ ವಯಸ್ಸು ಸುಮಾರು 70. ಮನೆಯಲ್ಲಿರುವ ಇಬ್ಬರೂ ಹೆಣ್ಣುಮಕ್ಕಳು ಬೌದ್ಧಿಕವಾಗಿ ಸವಾಲಿಗೊಳಪಟ್ಟವರು. ಸ್ವತಃ ಈಕೆಯೇ ಅಷ್ಟೂ ಜನರನ್ನು ಸಾಕಬೇಕು. ಇದು ಸಾಲದ್ದೆಂಬಂತೆ ಮಳೆಯ ಹೊಡೆತಕ್ಕೆ ಮನೆ ಬಿದ್ದು ಅತಂತ್ರರಾಗಿದ್ದ ಕುಟುಂಬ ಅದು. ಆಗ ಯುವಾಬ್ರಿಗೇಡ್‌ನ ಕಾರ್ಯಕರ್ತರು ಇದನ್ನು ಗಮನಿಸಿ ಬಲು ಸುಂದರವಾದ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದು ಮಾತನಾಡಿದ್ದು, ಯುವಾ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ, ಆಕೆಗೆ ಮನೆಯನ್ನು ಒಪ್ಪಿಸಿಕೊಡುವಾಗ ಎಲ್ಲರ ಮುಖದಲ್ಲೂ ಮಂದಹಾಸವಿದ್ದರೆ, ಅಜ್ಜಿಯ ಕಂಗಳಲ್ಲಿ ಅವ್ಯಕ್ತವಾದ ಕಣ್ಣೀರ ಹನಿಗಳಿದ್ದವು. ಆಕೆಗೆ ಒಳಿತಾಗಲಿ ಎಂದಷ್ಟೇ ಹಾರೈಸಿ ಬಂದಿದ್ದೇವೆ ಎಂದರು.