ಗೋಕರ್ಣ: ಕಲಿಯುಗದ ಆವಿಷ್ಕಾರ ಹಾಗೂ ಋಷಿಯುಗದ ಸಾಕ್ಷಾತ್ಕಾರದ ಸಮನ್ವಯದಿಂದಷ್ಟೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಸ್ವಾಮೀಜಿ ಅಭಿಪ್ರಾಯಪಟ್ಟರು.
ಸಿಇಟಿ, ನೀಟ್, ಜೆಇಇ ಮತ್ತಿತರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಆರಂಭಿಸಿರುವ ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಋಷಿಯುಗ ನವಯುಗಗಳ ಸಮ್ಮಿಲನವನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದಲೇ ಐದು ಗುರುಕುಲಗಳು ನಿರ್ಮಾಣವಾಗಿವೆ. ಮಕ್ಕಳು ಉತ್ತಮ ಆಧುನಿಕ ಶಿಕ್ಷಣ ಪಡೆಯುವ ಜತೆಗೆ ಸಂಸ್ಕಾರವಂತರಾಗಬೇಕು ಹಾಗೂ ಜೀವನದಲ್ಲಿ ಎಂದಿಗೂ ಸೋಲಬಾರದು ಎನ್ನುವ ಕಾರಣಕ್ಕೆ ಜೀವನ ಶಿಕ್ಷಣವನ್ನೂ ಬೋಧಿಸಲಾಗುತ್ತಿದೆ ಎಂದು ಬಣ್ಣಿಸಿದರು.
ಆಧುನಿಕ ವಿದ್ಯೆ, ಸಂಪತ್ತು ಹೀಗೆ ಭೌತಿಕ ಜೀವನದ ಮೂಲ ಅಗತ್ಯತೆಗಳನ್ನು ಪಡೆದ ಬಳಿಕ ನಾವು ಸಮಾಜದಲ್ಲಿ ಹೇಗೆ ಬಾಳ್ವೆ ನಡೆಸುತ್ತೇವೆ ಎನ್ನುವುದೂ ಮುಖ್ಯ. ಉತ್ತಮ ಜೀವನ ನಡೆಸಲು ನೈತಿಕ ಸಂಸ್ಕಾರಗಳು ಅಗತ್ಯ. ಇದನ್ನು ವಿವಿವಿ ಗುರುಕುಲಗಳಲ್ಲಿ ಮಕ್ಕಳಿಗೆ ಬೋಧಿಸುವ ಮೂಲಕ ಭವ್ಯ ರಾಷ್ಟ್ರ ನಿರ್ಮಾಣದ ಪ್ರಯತ್ನ ನಡೆದಿದೆ ಎಂದರು.

RELATED ARTICLES  ಹೆಗಡೆಯಲ್ಲಿ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ದಿನಕರ ಶೆಟ್ಟಿ

ಆಧುನಿಕ ಹಾಗೂ ಪಾರಂಪರಿಕ ಶಿಕ್ಷಣ ಒಂದು ರಥದ ಎರಡು ಚಕ್ರಗಳಿದ್ದಂತೆ; ಎರಡೂ ಸಮಾನಾಂತರವಾಗಿ ಚಲಿಸಿದಾಗ ಮಾತ್ರ ಮುನ್ನಡೆಯುವುದು ಸಾಧ್ಯವಾಗುತ್ತದೆ. ಹಳೆ ಯುಕ್ತಿ, ಹೊಸ ತತ್ವದೊಂದಿಗೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕು ಎನ್ನುವುದೇ ಧ್ಯೇಯ. ಇಂಥ ವ್ಯಕ್ತಿತ್ವ ನಿರ್ಮಾಣದ ಮೂಲಕ ವಿವಿವಿ ಗುರುಕುಲಗಳು ವಿಶ್ವಕ್ಕೆ ಕೊಡುಗೆಯಾಗಲಿವೆ ಎಂದು ಹೇಳಿದರು.

RELATED ARTICLES  ಜ.20ಕ್ಕೆ ಕಗ್ಗ ಕಿರುಚಿತ್ರ ಬಿಡುಗಡೆ ಸಮಾರಂಭ ಮತ್ತು ಚಿತ್ರ ವಿಮರ್ಶೆ ಕಾರ್ಯಕ್ರಮ

ಉತ್ತಮ ಉದ್ಯೋಗ ಗಳಿಸುವ ದೃಷ್ಟಿಯಿಂದ ಕೌಶಲ ರೂಢಿಸಿಕೊಳ್ಳಲು ಆಧುನಿಕ ಶಿಕ್ಷಣ, ಇಂಥ ತರಬೇತಿಗಳು ನೆರವಾಗುತ್ತವೆ. ಜೀವನ ಸತ್ವ, ಧ್ಯೇಯಗಳ ಬಗ್ಗೆ ಪಾರಂಪರಿಕ ಶಿಕ್ಷಣದ ಮೂಲಕ ತಿಳಿಸಲಾಗುತ್ತದೆ. ಇವೆರಡರ ಸಮ್ಮಿಲನದಿಂದ ವಿದ್ಯಾರ್ಥಿಗಳ ಭವ್ಯ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾ ಪರಿಷತ್ ಉಪಾಧ್ಯಕ್ಷ ಡಾ.ಮರುವಳ ನಾರಾಯಣ ಭಟ್ ಸ್ವಾಗತಿಸಿದರು. ಶ್ರೀಶ ಬೈಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುಬ್ರಾಯ ಹೆಗಡೆ ಶುಭಾಶಂಸನೆಗೈದರು. ಎಂ.ಆರ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.