ಕುಮಟಾ: ಇಲ್ಲಿಯ ಗಿಬ್ ಹೈಸ್ಕೂಲಿನ ಮಣಕಿ ಮೈದಾನದಲ್ಲಿ ಕಲಾಗಂಗೋತ್ರಿ ಆಶ್ರಯದಲ್ಲಿ ನಡೆದ ಪೆರ್ಡೂರ ಮೇಳದ ಯಕ್ಷಗಾನ ವೇದಿಕೆಯಲ್ಲಿ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಭಾಗವತ ಗುಣವಂತೆ ಕೃಷ್ಣ ಭಂಡಾರಿ ಅವರಿಗೆ ಪ್ರದಾನ ಮಾಡಲಾಯಿತು. ಜಿಲ್ಲೆಯಲ್ಲಿ ಯಕ್ಷಗಾನದ ಸಮ್ಮೋಹಕತೆಯನ್ನು ದಿ.ದುರ್ಗಾದಾಸ ಗಂಗೊಳ್ಳಿ ಅವರ ನೆನಪಿನಲ್ಲಿ ಕಳೆದ 20 ವರ್ಷಗಳಿಂದ ವಿಸ್ತರಿಸಿಕೊಂಡು ಬಂದಿರುವ ಕಲಾಗಂಗೋತ್ರಿಯ ಕಲಾಸೇವೆ ಅದ್ವಿತೀಯವಾದುದು ಹಾಗೂ ಯಕ್ಷಗಾನ ಕಲೆಯ ಪರಂಪರೆಯನ್ನುಳಿಸಿಕೊಳ್ಳಲು ಮೇಲ್ಪಂಕ್ತಿ ಹಾಕಿಕೊಟ್ಟ ಮಾದರಿ ಇತರರಿಗೆ ಅನುಕರಣ ೀಯವಾಗಿದೆ ಎಂದು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರವಾರ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಶಿವಾನಂದ ನಾಯಕ ಅಭಿಪ್ರಾಯಪಟ್ಟರು.
ಜಾತ್ರೆಯ ದಿನ ರಾತ್ರಿ ನಡೆಯುವ ಚಂಡೆಮದ್ದಲೆ ಜುಗಲ್‍ಬಂದಿ ತಮ್ಮ ಮನೆಯಂಗಳದಲ್ಲಿ ಮಾರ್ದನಿಸಿ ಕರ್ಣಗಳಿಗಿಂಪು ನೀಡುತ್ತಾ, ಗಂಗೊಳ್ಳಿ ನೆನಪನ್ನು ಹೊತ್ತು ತರುತ್ತದೆ. ತಂದೆ ಮೋಹನ ಶೆಟ್ಟರ ಒಡನಾಡಿಯೆನಿಸಿದ್ದ ದುರ್ಗಾದಾಸರು ಯುವ ಸಮುದಾಯಕ್ಕೆ ಸಂಘಟನೆಯ ಕಿಚ್ಚು ಹಚ್ಚಿಸುತ್ತಿದ್ದರೆಂದು ಯುವ ಧುರೀಣ ರವಿಕುಮಾರ ಶೆಟ್ಟಿ ಸ್ಮರಿಸಿಕೊಂಡರು.
ಯುವಕರ ಜೀವನಾಡಿಯೆನಿಸಿದ್ದ ಗಂಗೊಳ್ಳಿ ತನ್ನಲ್ಲಿ ನಾಯಕತ್ವ ಗುಣ ರೂಪಿಸಿದ ರುವಾರಿಯಾಗಿದ್ದರೆಂದು ಯುವ ನೇತಾರ ಹಾಗೂ ತಾಲೂಕಿನಲ್ಲಿ ಉದ್ಯೋಗ ಮೇಳ ನಡೆಸುವ ಸಿದ್ಧತೆಯಲ್ಲಿರುವ ಸೂರಜ್ ನಾಯ್ಕ ಸೋನಿ ತಮ್ಮ ಮನದಿಂಗಿತ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲಾಗಂಗೋತ್ರಿಯ ಅಧ್ಯಕ್ಷ ಶ್ರೀಧರ ಎಂ. ನಾಯ್ಕ ವಕ್ಕನಳ್ಳಿ, ಕೊರೊನಾದಂತಹ ಕಷ್ಟಕರ ಸಂದರ್ಭದಲ್ಲೂ ಜಿಲ್ಲೆಯ ಜನ ಕಲಾವಿದರ ಒಳಿತಿಗಾಗಿ ನೆರವಾಗುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕಲಾವಿದ ರಾಯಾ ನಾಯ್ಕ ಹೆಗಡೆಯವರನ್ನು ಸನ್ಮಾನಿಸಲಾಯಿತು. ಪುರಸಭಾ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಉಪಸ್ಥಿತರಿದ್ದು ಶುಭಕೋರಿದರು.
ಸಂಘಟನೆಯ ಉಪಾಧ್ಯಕ್ಷ ಗಣೇಶ ಭಟ್ಟ ಸ್ವಾಗತಿಸಿ, ಆಶಯ ಮಾತುಗಳನ್ನಾಡಿದರು. ಪುರಸಭಾ ಸದಸ್ಯ ಎಂ.ಟಿ.ನಾಯ್ಕ ಸನ್ಮಾನ ಪತ್ರ ವಾಚಿಸಿದರೆ ಎಸ್.ಟಿ. ಭಟ್ಟ ನಿರೂಪಿಸಿದರು. ಪ್ರೊ.ಎಂ.ಆರ್.ನಾಯಕ ವಂದಿಸಿದರು. ಕಲಾಗಂಗೋತ್ರಿ ಬಳಗದ ಎಲ್ಲ ಸದಸ್ಯರು ಸಹಕರಿಸಿದರು. ನಂತರ ನಡೆದ ಸುಧನ್ವಾರ್ಜುನ-ಚಂದ್ರಾವಳಿ-ಸುದರ್ಶನ ವಿಜಯ ಎಂಬ ಪೌರಾಣ ಕ ಆಖ್ಯಾನಗಳು ಕಲಾಭಿಮಾನಿಗಳ ಮನಸೂರೆಗೊಂಡವು.