ಕಾರವಾರ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗಿದೆ.
ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ,ಹೊನ್ನಾವರ, ಕುಮಟಾ, ಹಳಿಯಾಳ, ಶಿರಸಿ ಮಹಾರಾಷ್ಟ್ರದ ಗಡಿಭಾಗದ ರಾಜ್ಯದ ಜಿಲ್ಲೆಗಳಾದ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಾಪುರ ಸೇರಿದಂತೆ ರಾಜ್ಯಾದ್ಯಂತ ಕೆಲವೆಡೆ ಗುಡುಗು ಮಿಂಚಿನಿಂದ ಕೂಡಿದ ಸಾಧಾರಣ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ವಾಯುಭಾರ ಕುಸಿತದಿಂದಾಗಿ ಉತ್ತರಕನ್ನಡದ ಹಲವೆಡೆ ಭಾರೀ ಮಳೆಯಾಗಿದೆ. ಸಂಜೆಯ ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು.ಹಲವೆಡೆ ಜಿಟಿ ಜಿಟಿ ಮಳೆ ಆರಂಭವಾಗಿ ಕೆಲವು ನಿಮಿಷಗಳಲ್ಲಿ ಜೋರಾಗಿ ಸುರಿಯಿತು. ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.
ಪ್ರಮುಖ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದು ವಾಹನಗಳು ನೀರಿನಲ್ಲೇ ಚಲಿಸುತ್ತಿದ್ದವು. ಏಕಾಏಕಿ ಮಳೆ ಸುರಿದಿದ್ದರಿಂದ ಕೆಲಸ ಮುಗಿಸಿ ಮನೆಗೆ ಹೊರಟಿದ್ದವರು ಪರದಾಡುವಂತಾಯಿತು.