ಕುಮಟಾ: ಅಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಉಪವಿಭಾಗಾಧಿಕಾರಿ ಎಂ. ಅಜಿತ ರೈ ತಾಲೂಕಿನ ಗೋಕರ್ಣದ ವಿವಿಧ ಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರೆತಯ ಬಗ್ಗೆ ಆಲಿಸಿ, ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗೋಕರ್ಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಅಲ್ಲಿನ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದರು. ಮುಖ್ಯವಾಗಿ ಇಲ್ಲಿನ ಆವಾರ ಅಸ್ವಚ್ಛತೆಯಿಂದ ಕೂಡಿದ್ದು, ಶೀಘ್ರದಲ್ಲೇ ಬಸ್ ನಿಲ್ದಾಣದ ಆವಾರವನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು. ಖಾಸಗಿ ವಾಹನಕ್ಕೆ ಸಾರಿಗೆ ಸಂಸ್ಥೆಯ ಜಾಗದಲ್ಲಿ ಪಾರ್ಕಿಂಗ್ ಅವಕಾಶ ನೀಡಿದ್ದು, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು. ಶುದ್ದ ಕುಡಿಯುವ ನೀರು, ಶೌಚಾಲಯ, ಸ್ನಾನ ಗೃಹದ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದು, ಜನರಿಗೆ ಸಮರ್ಪಕವಾಗಿ ಅನುಕೂಲ ಕಲ್ಪಿಸುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದರು.

ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ, ಇಲ್ಲಿನ ವ್ಯಯಸ್ಥೆಯ ಕುರಿತು ಮಾಹಿತಿ ಪಡೆದರು. ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಜನ್ನು ಈ ವೇಳೆ ಉಪಸ್ಥಿತರಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರೆತೆಯಿದ್ದು ಹೆಚ್ಚಿನ ಸಿಬ್ಬಂದಿ ನೇಮಿಸಬೇಕು. ಒಂದೇ ವೈದ್ಯಾಧಿಕಾರಿ ದಿನವಿಡೀ ಕೆಲಸ ಮಾಡಬೇಕಾದ ಅನಿರ್ವಾತೆಯಿದೆ. ಆದ್ದರಿಂದ ಇನ್ನೊಬ್ಬ ವೈದ್ಯರನ್ನು ನೇಮಿಸುವ ಬಗ್ಗೆ ಅಧಿಕಾರಿ ವರ್ಗದವರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಉಪವಿಭಾಗಾಧಿಕಾರಿಯವರಿಗೆ ತಿಳಿಸಿ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪನೆ ಸಲ್ಲಿಸಲಾಗಿದೆ. ಅಲ್ಲದೇ, ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರಲ್ಲಿಯೂ ಮನವಿ ಮಾಡಿದ್ದೇನೆ ಎಂದರು.

RELATED ARTICLES  ಜಯಾ ಯಾಜಿ ಶಿರಾಲಿ ಗೌರವಾರ್ಥ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ ಜಿಲ್ಲಾ ಕ.ಸಾ.ಪ.

ಆರೋಗ್ಯ ಕೇಂದ್ರದಲ್ಲಿ ನಡೆದ ರಾಷ್ಟೀಯ ಅಸಾಂಕ್ರಾಮಿಕ ರೋಗ ತಪಾಸಣೆ ಮತ್ತು ತಿಳುವಳಿಕೆ ಕಾರ್ಯಕ್ರಮದಲ್ಲಿ ಭಾಗವಹಸಿದ ಉಪವಿಭಾಗಾಧಿಕಾರಿ 30 ವರ್ಷ ಮೇಲ್ಪಟ್ಟ ವಯಸ್ಸಿನ ಜನರು ಮಧುಮೇಹ, ರಕ್ತದೊತ್ತಡದಂತಹ ಅಸಾಂಕ್ರಾಮಿಕ ರೋಗದ ತಪಾಸಣೆ ಮಾಡಿಸಿಕೊಂಡು ಪ್ರಾರಂಭ ಹಂತದಲ್ಲೇ ಔಷಧೋಪಚಾರ ಮಾಡಿಕೊಳ್ಳಬೇಕು ಎಂದರು. ಗ್ರಾಮ ಪಂಚಾಯತ ಘನ ತ್ಯಾಜ್ಯ ಘಟಕ್ಕೆ ಭೇಟಿ ನೀಡಿ, ಕಸ ಸಂಸ್ಕರಣೆ ಮತ್ತು ಕಸ ಸಂಗ್ರಹಣೆಯ ಬಗ್ಗೆ ಮಾಹಿತಿ ಪಡೆದು, ಪಂಚಾಯತದ ಅಡಿಯಲ್ಲಿ ನಡೆಯುತ್ತಿರುವ ಕಾರ್ಯಗಳ ಬಗ್ಗೆ ವಿವರ ಪಡೆದರು.

RELATED ARTICLES  ಗೋಡೌನ್ ನಲ್ಲಿ 102 ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಪಡಿತರ ಅಕ್ಕಿ ಪೊಲೀಸ್ ವಶಕ್ಕೆ

ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಶಿವರಾತ್ರಿ ಮಹೋತ್ಸವದಲ್ಲಿ ದೇವಾಲಯದಲ್ಲಿ ನಡೆಯವ ಕಾರ್ಯಕ್ರಮಗಳ ವಿವರ ಮತ್ತು ಭಕ್ತರಿಗೆ ನೀಡುವ ಸೌಕರ್ಯಗಳನ್ನು ದೇವಾಲಯದ ಆಡಳಿತದೊಂದಿಗೆ ಚರ್ಚಿಸಿದರು. ಅಲ್ಲದೇ, ಇಲ್ಲಿನ ಮುಖ್ಯ ಕಡಲತೀರದಲ್ಲಿ ನಡೆಯುತ್ತಿರುವ ಸಂಗಮ ನಾಲಾ ಸೇತುವೆ ಕಾಮಗಾರಿ ಪ್ರಗತಿ ವೀಕ್ಷಣೆ, ಸುಸಜ್ಜಿತ ಮೀನು ಮಾರುಕಟ್ಟೆ ಮಾಡಬಹುದಾದ ಜಾಗದ ಪರಿಶೀಲನೆ, ಈಗಿನ ಮೀನು ಮಾರುಕಟ್ಟೆಯ ಪರಿಸ್ಥಿಯನ್ನು ಖದ್ದು ಭೇಟಿ ನೀಡಿ ಪರಿಶೀಲಿಸಿದರು.

ನಂತರ ನಾಡಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ, ಪಿಂಚಣೆ ಸೇರಿದಂತೆ ಸರ್ಕಾರದದಿಂದ ಸಿಗುವ ವಿವಿಧ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಮೇಘರಾಜ ನಾಯ್ಕ, ತಾ.ಪಂ ಇಒ ಸಿ.ಟಿ.ನಾಯ್ಕ, ತಾ.ಪಂ ಅಭಿಯಂತರ ಆರ್.ಜಿ.ಗುನಗಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು