ಕುಮಟಾ: ಪಟ್ಟಣದ ಕೃಷಿ ಇಲಾಖೆ ವಶದಲ್ಲಿದ್ದ 4 ಎಕರೆ ಜಮೀನನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ ಕಾಲೇಜ್) ಕಟ್ಟಡ ನಿರ್ಮಾಣಕ್ಕೆ ಮಂಜೂರಿ ಮಾಡಿಸುವಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಯಶಸ್ವಿಯಾಗಿದ್ದು, ಸ್ಥಳ ಪರಿಶೀಲನೆ ನಡೆಸಿದರು.
ಕುಮಟಾದ ಸರ್ಕಾರಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ನಿವೇಶವನ್ನು ಪಟ್ಟಣದ ಕೃಷಿ ಪಾಠಶಾಲೆ ಮತ್ತು ಬೀಜೋತ್ಪಾದನಾ ಕೇಂದ್ರದ ವಶದಲ್ಲಿದ್ದ 4 ಎಕರೆ ಜಾಗವನ್ನು ಮಂಜೂರಿ ಮಾಡಿಸುವಲ್ಲಿ ಶಾಸಕ ದಿನಕರ ಶೆಟ್ಟಿ ಅವರ ಅವಿರಥ ಪ್ರಯತ್ನ ಕೊನೆಗೂ ಫಲ ಕೊಟ್ಟಿದೆ. ಹೊಸ ಬಸ್ ನಿಲ್ದಾಣದ ಪಕ್ಕದಲ್ಲೇ ಐಟಿಐ ಕಾಲೇಜ್ ನಿರ್ಮಾಣವಾಗಲಿರುವುದು ಎಲ್ಲ ವಿದ್ಯಾರ್ಥಿಗಳಿಗೂ ಸಂತಸ ಮೂಡುವಂತಾಗಿದೆ. ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಜಿಪಂ ಸದಸ್ಯ ಗಜಾನನ ಪೈ, ಕೃಷಿ ಇಲಾಖೆ, ಪುರಸಭೆ, ಪಿಡಬ್ಲ್ಯೂಡಿ ಅಧಿಕಾರಿಗಳ ತಂಡ ನಿವೇಶನವಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ 4 ಎಕರೆ ವಿಶಾಲವಾದ ಪ್ರದೇಶವು ಕಾಲೇಜ್ ನಿರ್ಮಾಣಕ್ಕೆ ಪ್ರಸಸ್ತವಾಗಿದೆ ಎಂಬ ಅಭಿಪ್ರಾಯ ಎಲ್ಲ ಅಧಿಕಾರಿಗಳಿಂದ ವ್ಯಕ್ತವಾಯಿತು.
ಪಟ್ಟಣದ ಹೆಗಡೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಬಾಡಿಗೆ ಕಟ್ಟಡದಲ್ಲಿ 2014 ಆಗಸ್ಟರಲ್ಲಿ ಐಟಿಐ ಕಾಲೇಜ್ ಆರಂಭಿಸಲಾಯಿತು. ಪಿಟ್ಟರ್ ಮತ್ತು ಇಲೆಕ್ಟ್ರಿಕಲ್ ವಿಭಾಗದಲ್ಲಿ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಾಡಿಗೆ ಕಟ್ಟಡವಾಗಿದ್ದರಿಂದ ಕಾಲೇಜ್‍ಗೆ ಅಗತ್ಯವಾದ ಪೂರಕ ವಾತಾವರಣ ಇಲ್ಲದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿತ್ತು. ಅಲ್ಲದೇ, ಪ್ರತಿ ತಿಂಗಳು ಕಾಲೇಜ್ ಕಟ್ಟಡಕ್ಕೆ 89 ಸಾವಿರ ಬಾಡಿಗೆಯನ್ನು ಸರ್ಕಾರ ಪಾವತಿಸಬೇಕಾಗಿದ್ದರಿಂದ ಬಾಡಿಗೆ ಮೊತ್ತ ಹೊರೆಯಾಗಿ ಪರಿಣಮಿಸಿತ್ತು. ಹಾಗಾಗಿ ಐಟಿಐ ಕಾಲೇಜ್‍ನ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ನಿವೇಶನದ ಹುಡುಕಾಟ ನಡೆದಿತ್ತು. 2018ರಲ್ಲಿ ಕಾಲೇಜ್ ಕಟ್ಟಡ ನಿರ್ಮಾಣಕ್ಕೆ 2.40 ಕೋಟಿ ರೂ. ಅನುದಾನ ಬಿಡುಗಡೆಯಾಗಿ, ಧಾರೇಶ್ವರದ ಹರನೀರನ ಕಾಡು ಪ್ರದೇಶದಲ್ಲಿ ಕಾಲೇಜ್ ನಿರ್ಮಾಣಕ್ಕೆ ನಿವೇಶನ ನಿಗಧಿಪಡಿಸಲಾಗಿತ್ತು.
ಈ ಜಾಗವನ್ನು ಪರಿಶೀಲಿಸಲು ತೆರಳಿದ ಶಾಸಕ ದಿನಕರ ಶೆಟ್ಟಿ ಅವರು ಈ ಕಾಡಿನಲ್ಲಿ ಕಾಲೇಜ್ ನಿರ್ಮಿಸುವುದು ಸೂಕ್ತವಲ್ಲ. ವಿದ್ಯಾರ್ಥಿಗಳ ರಕ್ಷಣೆ ಮತ್ತು ಹಿತದೃಷ್ಟಿಯಿಂದ ಪಟ್ಟಣ ವ್ಯಾಪ್ತಿಯಲ್ಲಿಯೇ ನಿವೇಶನ ಗುರುತಿಸಿಕೊಡುವ ಭರವಸೆ ನೀಡಿದ ಶಾಸಕರು, ತಕ್ಷಣ ಕೃಷಿ ಇಲಾಖೆಯ ವಶದಲ್ಲಿರುವ ಪ್ರದೇಶವನ್ನು ಐಟಿಐ ಕಾಲೇಜ್‍ಗೆ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದಾರೆ. ಪಟ್ಟಣದ ಚಿಕ್ಕೊಳ್ಳಿ ಗ್ರಾಮದಲ್ಲಿರುವ ಕೃಷಿ ಪಾಠಶಾಲೆ ಮತ್ತು ಬೀಜೋತ್ಪಾದನಾ ಕೇಂದ್ರದ ವಶದಲ್ಲಿದ್ದ 61.35 ಎಕರೆ ಪ್ರದೇಶದಲ್ಲಿ ಚಿಕ್ಕೊಳ್ಳಿ ಗ್ರಾಮದ ಸರ್ವೆ ನಂಬರ್ 4ರ ಪೈಕಿ 4 ಎಕರೆ ಪ್ರದೇಶವನ್ನು ಐಟಿಐ ಕಾಲೇಜ್ ನಿರ್ಮಾಣಕ್ಕೆ ನೀಡುವಂತೆ ಶಾಸಕರು ಕೃಷಿ ವಿವಿಗೆ ಎರಡು ತಿಂಗಳ ಹಿಂದೆ ಮನವಿ ಮಾಡಿದ್ದರು.
ಶಾಸಕರ ಮನವಿಗೆ ಸ್ಪಂದಿಸಿದ ಕೃಷಿ ವಿವಿಯ ಕುಲ ಸಚಿವರು ಐಟಿಐ ಕಾಲೇಜ್ ಗೆ ಅಗತ್ಯವಾದ ಜಮೀನನ್ನು ಸರ್ಕಾರಿ ನಿಯಮದ ಪ್ರಕಾರ ಹಸ್ತಾಂತರಿಸಬಹುದು. ಆದರೆ ಈ ಜಮೀನು ಮೂಲತಃ ಕೃಷಿ ಇಲಾಖೆಯದ್ದಾಗಿರುವುದರಿಂದ ಕೃಷಿ ಆಯಕ್ತರಿಗೆ ಅಭಿಪ್ರಾಯ ಕೇಳಲಾಗಿದೆ. ಕೃಷಿ ಆಯುಕ್ತರು ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಅಲ್ಲದೇ, ಸರ್ಕಾರದ ಅನುಮೋದನೆಯೊಂದಿಗೆ ನಿಯಮಾನುಸಾರ ಜಮೀನನ್ನು ಹಸ್ತಾಂತರಿಸಬಹುದೆಂದು ಕೃಷಿ ಜಂಟಿ ನಿರ್ದೇಶಕರು ಅಭಿಪ್ರಾಯ ನೀಡಿದ್ದಾರೆ. ಮುಂದಿನ ಕ್ರಮಕ್ಕಾಗಿ ಕೃಷಿ ಆಯುಕ್ತಾಲಯದಿಂದ ಪ್ರಸ್ತಾವನೆ ಸಲ್ಲಿಸಲಾಯಿತು.
ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು 4 ಎಕರೆ ಪ್ರದೇಶವನ್ನು ಐಟಿಐ ಕಾಲೇಜ್ ನಿರ್ಮಾಣಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿದೆ. ಈ ಎಲ್ಲ ಸರ್ಕಾರಿ ಪ್ರಕ್ರಿಯೆಯ ಹಿಂದೆ ಶಾಸಕ ದಿನಕರ ಶೆಟ್ಟಿ ಅವರ ಅವಿರಥ ಶ್ರಮವಿದೆ. ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಗೂ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸುವ ಮೂಲಕ ಈ 4 ಎಕರೆ ಪ್ರದೇಶವನ್ನು ಐಟಿಐ ಕಾಲೇಜ್‍ಗೆ ಹಸ್ತಾಂತರವಾಗುವಂತಾಗಿದೆ. ಕಾಲೇಜ್ ಪ್ರಾಂಶುಪಾಲರು, ವಿದ್ಯಾರ್ಥಿಗಳು ಶಾಸಕರ ಶ್ರಮವನ್ನು ಶ್ಲಾಘೀಸುವ ಜೊತೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗಜಾನನ ಪೈ, ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಉಪಾಧ್ಯಕ್ಷ ರಾಜೇಶ ಪೈ, ಐಟಿಐ ಕಾಲೇಜ್ ಪ್ರಾಂಶುಪಾಲ ಡಿ.ಟಿ ನಾಯ್ಕ, ಕುಮಟಾ ಕೃಷಿ ಸಹಾಯಕ ನಿರ್ದೇಶಕಿ, ತಾಪಂ ಇಒ ಸಿ.ಟಿ.ನಾಯ್ಕ, ಪಿಡಬ್ಯ್ಲೂಡಿ ಇಂಜಿನಿಯರ್ ಶಶಿಕಾಂತ, ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ, ಬಿಜೆಪಿ ಪ್ರಮುಖರಾದ ಜಿ ಎಸ್ ಗುನಗಾ, ಸುಧೀರ ಪಂಡಿತ, ವಿನಾಯಕ ನಾಯ್ಕ ಬಗ್ಗೋಣ ಇತರರು ಇದ್ದರು.