ಯಲ್ಲಾಪುರ: ಬುಧವಾರ ನಾಪತ್ತೆಯಾಗಿದ್ದ ತಾಲೂಕಿನ ನಂದೊಳ್ಳಿಯ ವಿದ್ಯಾರ್ಥಿಯೋರ್ವಳು ರಾತ್ರಿ ವೇಳೆಯಲ್ಲಿ ಅರಣ್ಯದಲ್ಲಿ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಯಲ್ಲಾಪುರದ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಬುಧವಾರ ಸಂಜೆ ಶಾಲೆಯಿಂದ ಮಾಗೋಡ ಬಸ್‌ನಲ್ಲಿ ಮನೆಗೆ ಬರುತ್ತಿದ್ದಳು. ಮನೆ ಹತ್ತಿರದ ಬಸ್ ಸ್ಟಾಪ್ ನಂದೊಳ್ಳಿಯಲ್ಲಿ ಇಳಿದಿದ್ದಳು. ಆದರೆ, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ಮನೆಯವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

RELATED ARTICLES  ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಹುಟ್ಟೂರು ಹೊಸಾಕುಳಿಯಲ್ಲಿ ನಡೆದ ಚಿಟ್ಟಾಣಿ ಪ್ರಶಸ್ತಿ ಪ್ರದಾನ ಸಮಾರಂಭ

ಸಂಜೆಯಿಂದ ರಾತ್ರಿಯವರೆಗೆ ಗ್ರಾಮಸ್ಥರೆಲ್ಲ ಸೇರಿ ಹುಡುಕಿದರೂ ವಿದ್ಯಾರ್ಥಿನಿ ಪತ್ತೆಯಾಗಿರಲಿಲ್ಲ. ಮಧ್ಯರಾತ್ರಿ ಮನೆಯ ಸಮೀಪದ ಕಾಡಿನಲ್ಲಿ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿದ್ಯಾರ್ಥಿನಿಗೆ ಯಾವುದೇ ಅಪಾಯವಾಗಿಲ್ಲ.

ಬುಧವಾರ ಸಂಜೆ ವೇಳೆ ಬೈಕ್ ಮೇಲೆ ಯುವತಿಯನ್ನು ಯಾರೋ ಮಾಗೋಡ ಕಡೆ ಕರೆದೊಯ್ಯುವುದನ್ನು ನೋಡಿರುವುದಾಗಿ ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು. ಇದೇ ವೇಳೆ ಪೊಲೀಸರು ವಿದ್ಯಾರ್ಥಿನಿಯ ಮನೆಗೂ ಭೇಟಿ ನೀಡಿ ಕುಟುಂಬದವರೊಂದಿಗೆ ಚರ್ಚಿಸಿದ್ದಾರೆ. ತನಿಖೆಯನ್ನು ಚುರುಕುಗೊಳಿಸಲಾಗಿದೆ.

ಬೈಕ್‌ನಲ್ಲಿ ಬಂದ ಮೂವರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಅಪಹರಿಸಿದ್ದರು ಎಂದು ಆಕೆ ಹೇಳಿದ್ದಾಳೆ. ರಾತ್ರಿ ವೇಳೆ ಕೈಕಾಲು ಕಟ್ಟಿ ಮನೆಯ ಬಳಿಯ ಕಾಡಿನಲ್ಲಿ ಬಿಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದು, ಬೈಕ್‌ನಲ್ಲಿ ಬಂದವರು ಯಾರು ಎಂದು ಪತ್ತೆ ಹಚ್ಚಬೇಕಿದೆ. ವಿದ್ಯಾರ್ಥಿನಿಯನ್ನು ಕಟ್ಟಿ ಹಾಕಿದ್ದ ಸ್ಥಳವನ್ನು ಡಿವೈಎಸ್‌ಪಿ ರವಿ ನಾಯ್ಕ, ಪಿಐ ಸುರೇಶ ಯಳ್ಳೂರ ಹಾಗೂ ಪಿಎಸ್‌ಐ ಮಂಜುನಾಥ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

RELATED ARTICLES  ಯುವಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದರೆ ನಮ್ಮ ದೇಶ ವಿಶ್ವಗುರು ಸ್ಥಾನಕ್ಕೇರಲು ಸಾಧ್ಯ : ನಾಗರಾಜ ನಾಯಕ ತೊರ್ಕೆ.