ಲೇಖನ : ಚಿದಾನಂದ ಭಂಡಾರಿ, ಕಾಗಾಲ – ಸದಸ್ಯರು ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ

ಕುಮಟಾ : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕನಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಕುಮಟಾದ ಹೊಲನಗದ್ದೆ ಗ್ರಾಮದ ಕಡ್ಲೆಯ ಗಜಾನನ ಶಿವಯ್ಯ ನಾಯ್ಕ ಅವರ ಪರಿಚಯ ನನಗಾದದ್ದು ನಾನು ಪಿಯುಸಿ ವಿದ್ಯಾರ್ಥಿ ಆದಾಗಿನಿಂದ.ಆಗೆಲ್ಲ ಕಾಲೇಜಿಹೋಗಲು ನಮ್ಮೂರಿನಿಂದ ತಾಸಿಗೊಂದರ ಹಾಗೆ ಬಸ್ ಸೌಲಭ್ಯ ಇತ್ತು.ಕೆಲವೊಮ್ಮೆ ಬಸ್ ಕೆಟ್ಟು ನಿಂತರೆ ಎರಡು ಮೂರು ತಾಸೇ ಕಾಯಬೇಕಾಗುತಿತ್ತು.ಅಂಥದರಲ್ಲಿ ಅಘನಾಶಿನಿಯಿಂದಲೇ ಬಸ್ ತುಂಬಿ ತುಳುಕುತ್ತಾ ಬರುತ್ತಿತ್ತು.ನಮ್ಮ ನಿಲ್ದಾಣದಲ್ಲಿ ಬಸ್ ನಿಲುಗಡೆ ಆದರೆ ಪುಣ್ಯ ಅನ್ನುವ ಪರಿಸ್ಥಿತಿ ಇರುವಂಥ ದಿನಗಳೂ ಇದ್ದು ಆದಿನದ ತರಗತಿಯಲ್ಲಿ ಹಾಜರಿ ಬಸ್ ಡ್ರೈವರುಗಳ ಮೇಲೆಯೇ ಅವಲಂಬಿತವಾಗುವಂಥ ದಿನಗಳು ಅದಾಗಿದ್ದವು ಆದರೆ ಯಾವ ದಿನ ಕಡ್ಲೆಯ ಗಜ್ಜಣ್ಣ ಡ್ರೈವರ್ ಇರುತಿದ್ದರೋ ಆದಿನ ನನ್ನಪಾಲಿಗೆ ಬಸ್ ಎಷ್ಟೇ ರಶ್ ಇದ್ದರೂ ನಿಲುಗಡೆ ಖಚಿತವಾಗಿರುತಿತ್ತು.‌ಹಾಗೂ ಡ್ರೈವರ್ ಪಕ್ಕದ ಬಾನೆಟ್ ನನಗೆ ಆಸನವಾಗಿ ಕಾಯ್ದಿರಿಸಲ್ಪಡುತಿತ್ತು.ಅದಕ್ಕೆ ಕಾರಣ ಪ್ರಯಾಣಿಕನಾಗಿ ಬಸ್ ಬಳಗಡೆ ನನ್ನ ಸೌಜನ್ಯದ ವ್ಯವಹಾರ .ಆಗೆಲ್ಲ ಕಾಲೇಜು ವಿದ್ಯಾರ್ಥಿಗಳನ್ನು ನಿಭಾಯಿಸುವುದೇ ಕಂಡಕ್ಟರ್ ಹಾಗೂ ಡ್ರೈವರ್ ಗಳಿಗೆ ಸವಾಲಿನ ಕೆಲಸವಾಗಿರುತಿತ್ತು.ಸಿಟಿ ಬಸ್ ನ ಎರಡೂ ಬಾಗಿಲಲ್ಲಿ ಜೋತಾಡುತ್ತ ಅರ್ಧ ಶರೀರ ಬಸ್ ನಿಂದ ಹೊರಗೆ ಕಾಣುವಂತೆ ಗಾಳಿಯಲ್ಲಿ ತೇಲುತ್ತಾ ಹೋಗುವುದೆಂದರೆ ಪ್ರೇಮಲೋಕದ ರವಿಚಂದ್ರನ್ ಹಾಗೆ ಎಂದೇ ಭಾವಿಸಿಕೊಳ್ಳುವವರೂ ಇದ್ದರು. ಅಂಥವರೆಂದರೆ ಡ್ರೈವರ್ ಗಜಣ್ಣಗೆ ಅಲರ್ಜಿ ಅವರನ್ನು ” ಓ ಬಾಗಿಲ ಜಟಗಗಳೇ ಮೇಲೆ ಬನ್ನಿ ಒಂದು ನೀ ಮೇಲ್ಬಾ ಇಲ್ಲಾ ನಾ ಬಸ್ ಬಿಡುದಿಲ್ಲ ” ಎಂದು ಜೋರಾಗಿ ಗದರಿ ಅವರು ಮೇಲೆ ಬಂದು ನಿಂತಾಗಲೇ ಬಸ್ ಮುಂದೆ ಹೋದ ದಿನಗಳೂ ಹಲವಿದ್ದವು ಹೀಗಿರುವಾಗ ಬಸ್ ಹತ್ತಿದ ತಕ್ಷಣ ಬಾಗಲುಬಿಟ್ಟು ಎಲ್ಲೋ ಮೂಲೆಯಲ್ಲಿ ತೆಪ್ಪಗೆ ನನ್ನ ದೃಢ ಶರೀರವನ್ನು ಮುಡುಗಿ ಕೊಂಡು ನಿಂತುಕೊಳ್ಳುವ ನನ್ಮನ್ನು ಗಮನಿಸುತ್ತಿದ್ದ ಗಜ್ಜಣ್ಣಗೆ ನನ್ನ ಮೇಲೆ ಕನಿಕರ ಉಂಟಾಗಿಯೋ ಏನೋ ಅವರೇ ಕರೆದು ಮುಂದೆ ಬಿಸಿ ಬಾನೆಟ್ ಮೇಲೆ ಪೇಪರ್ ಹಾಸಿಕೊಡುತ್ತಿದ್ದರು.

RELATED ARTICLES  ಶಾಂತಾ ರಾಧಾಕೃಷ್ಣ ದತ್ತಿ ಪ್ರಶಸ್ತಿ ಪ್ರಕಟ : ಐನಕೈನ ನಿರಂಜನ ಆರ್.ಭಟ್ಟರಿಗೆ ಪ್ರಶಸ್ತಿ

ಈ ಪರಿಚಯವೇ ಸಲುಗೆಯಾಗಿ ಮುಂದೆ ಗಜಣ್ಣ ಎಂದರೆ ನಮ್ಮ ಕುಟುಂಬದ ಎಲ್ಲರಿಗೂ ಆಪ್ತರಾಗಿ ಸಂಬಂಧಿಕರಂತಾದರು.ಗಜಣ್ಣ ಅವರು ತಮ್ಮ ವೃತ್ತಿಯಲ್ಲಿ ತುಂಬಾ ಶ್ರದ್ಧೆ ಹಾಗೂ ಭಕ್ತಿಯುಳ್ಳವರು ದಿನದ ಡ್ಯೂಟಿ ಆರಭಿಸುವಾಗ ಡ್ರೈವರ್ ಸೀಟಮೇಲೆ ಕುಳಿತು ಸ್ಟೇರಿಂಗ ಹಿಡಿಯುವ ಮುಂಚೆ ಎರಡೂ ಕೈಮುಗಿದು ಕಣ್ಮುಚ್ಚಿ ನಮಸ್ಕಾರ ಮಾಡುವ ಪರಿಯೇ ನೋಡುವ ಹಾಗಿರುತ್ತದೆ.ಡ್ಯೂಟಿ ಮುಗಿಸಿ ಮನೆಗೆ ಬಂದು ಊಟಮಾಡುವ ಮೊದಲು ಕೊಟ್ಟಿಗೆಗೆ ಹೋಗಿ ಗೋವುಗಳಿಗೆ ಆಹಾರ ನೀಡಿದ ಬಳಿಕವೇ ಊಟಮಾಡುವುದು ಅವರ ನಿಯತಿ ಆಗಿತ್ತು.ಕುಮಟಾ ಅಘನಾಶಿನಿ ಮಾರ್ಗದ ಖಾಯಂ ಡ್ರೈವರ್ ಆಗಿರುವ ಅವರು ಇಲ್ಲಿನ ಬಹುತೇಕ ಎಲ್ಲರಿಗೂ ಚಿರಪರಿಚಿತರು ಹಾಗೂ ನೇರ ನಿಷ್ಠುರ ನುಡಿಯಿಂದ ಕೆಲವರಿಗೆ ಅಪಥ್ಯ ಎನಿಸಿದರೂ ತಮ್ಮ ನಿಲುವು ಸಡಿಲಿಸಿಕೊಳ್ಳದವರು. ದುಡಿಮೆ ಹಾಗೂ ದೇವರನ್ನು ಬಲವಾಗಿ ನಂಬಿದವರು.

ವರದಾಪುರದ ಶ್ರೀಧರ ಸ್ವಾಮಿಗಳ ಭಕ್ತರಾಗಿರುವ ಇವರು ನನ್ನನ್ನು ಹಾಗೂ ನನ್ನ ಮಾವನ ಮಗ ವಿನಾಯಕ ಬೀರಕೋಡಿ ಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು.ಆ ಸಂದರ್ಭ ಅಂತೂ ಮರೆಯಲು ಅಸಾಧ್ಯ ವಾದುದು ಹೆಚ್ಚಿನ ವಾಹನ ವ್ಯವಸ್ಥೆ ಇಲ್ಲದ ದಿನಗಳವು ಕಾಲ್ನಡಿಗೆಯಲ್ಲಿ ಸಿದ್ದಾಪುರಮಾರ್ಗದಲ್ಲಿ ಹೋಗಿದ್ದೆವು ಅಲ್ಲಲ್ಲಿ ಸಿಗುವ ಎಲ್ಲಾಬಗೆಯ ವಾಹನ ಹಿಡಿದು ಅರ್ಧರ್ಧ ಕ್ರಮಿಸಿ ಕಾಡಿನ ಹಣ್ಣು ಕೊಯ್ದು ತಿನ್ನುತ್ತಾ ವರದಳ್ಳಿ ತಲುಪಿದ ಅನುಭವ ನೆನಪಿಕೊಳ್ಳಲು ಕುಶಿ ಕೊಡುವಂಥದ್ದು.ಪುಸ್ತಕ ಪ್ರೇಮಿಯಾದ ಗಜಣ್ಣ ನಿರಂತರ ಓದುಗರು ರಾಷ್ಟ್ರ ಭಕ್ತಿಯ ವಿಷಯವೇ ತುಂಬಿರುವ ಅಸೀಮಾ ಪುಸ್ತಕವನ್ನು ಒಂದೂ ಬಿಡದೇ ಓದುತಿದ್ದರು ಹಾಗೂ ಅದರಲ್ಲಿ ಬರುವ ರೋಚಕ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಳ್ಳುತಿದ್ದರು.ಶಬರೀ ಮಲೈ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ವೃತ ಆಚರಿಸಿ ಹೋಗಿಬಂದ ಬಳಿಕ ಒಮ್ಮೆ ದರ್ಶನ ಮಾಡಿದರೆ ಸಾಕು ಪದೇ ಪದೇ ಒಬ್ಬನೇ ಹೋದರೆ ಅದು ಸ್ವಾರ್ಥ ಆಗುತ್ತದೆ ಮಡದಿ ಮಕ್ಕಳನ್ನು ಬಿಟ್ಟು ಹೋಗುವ ಬದಲು ಅದೇ ಖರ್ಚಿನಲ್ಲಿ ಎಲ್ಲರೂ ಬೇರೆಲ್ಲಾದರೂ ಹೋಗಿಬರಬಹುದು ಎಂಬುದು ಅವರ ಅಭಿಪ್ರಾಯ .ಗಜಣ್ಣ ತಾವು ನಡೆದ ದಾರಿಯಲ್ಲೇ ಮಕ್ಕಳೂ ಸಾಗಬೇಕೆಂಬ ಹಂಬಲ ಉಳ್ಳವರು ಅವರ ಧರ್ಮ ಪತ್ನಿ ಇಬ್ಬರು ಗಂಡು ಮಕ್ಕಳು ಓರ್ವ ಮಗಳು ಇವರ ಆಶಯದಂತೇ ನಡೆದುಕೊಂಡವರಾದ್ದರಿಂದ ಇವರದ್ದು ಸಂತೃಪ್ತ ಸಂಸಾರ ಎನ್ನಬಹುದು.

RELATED ARTICLES  ವಾಹನ ಸಮೇತ ಗೋವಾ ಮದ್ಯ ವಶಕ್ಕೆ

ಗಜಣ್ಣ ಸೇವಾ ನಿವೃತ್ತಿ ಆದಬಳಿಕ ಕಾಶೀ ಯಾತ್ರೆಯನ್ನೂ ಪೂರೈಸಿದರು ಇವೆಲ್ಲದರ ನಡುವೆ ನನಗೆ ಅತ್ಯಂತ ಇಷ್ಟವಾದ ಇವರ ಇನ್ನೊಂದು ಕಾರ್ಯವೆಂದರೆ ಕಡ್ಲೆಯ ಗಾಂಧಿವನದ ಬಳಿ ಇವರುಸದ್ದಿಲ್ಲದೇ ನೆಟ್ಟು ಬೆಳೆಸಿದ ಅಶ್ವಥ್ ಗಿಡ ದಿನವೂ ಅದನ್ನು ಆರೈಕರಮಾಡುತ್ತ ಬಂದ ಇವರ ಜೀವನ ದೊಡ್ಡ ಕನಸೆಂದರೆ ಆ ವೈಕ್ಷಕ್ಕೆ ಕಲ್ಲಿನ ಕಟ್ಟೆಯ ಕಟ್ಟಿ ಈ ನೆಲದ ನಂಬಿಕೆಯ ಉಪನಯನ ಸಂಸ್ಕಾರ ಮಾಡಿಸುವುದು, ಆಗಾಗ ಈ ವಿಷಯ ಅವರು ಪ್ರಸ್ತಾಪಿಸುತ್ತಲೇ ಇದ್ದರೂ ಇಷ್ಟು ಬೇಗನೆ ಗುರಿಸಾಧಿಸಿ ಬಿಡುವರೆಂದು ನಾನು ಅಂದುಕೊಂಡಿರಲಿಲ್ಲ ! ನಿನ್ನೆ ಗುರುವಾರ ದಿನಾಂಕ ೨೫/೦೨/ ೨೦೨೧ ರಂದು ಗಾಂಧೀ ವನದಲ್ಲಿ ನೂರಾರು ಜನರ ಸಮ್ಮುಖ ಶಾಸ್ತ್ರೋಕ್ತವಾಗಿ ಆ ಅಶ್ವತ್ಥ ಮರಕ್ಕೆ ಉಪನಯನ ಮಾಡಿದ ಗಜಣ್ಣನ ಮುಖದಲ್ಲಿ ಏನೋ ಧನ್ಯತಾ ಭಾವ ಎದ್ದು ಕಾಣುತಿತ್ತು ಅವರ ಕುಟುಂಬ ಪರಿವಾರ ಸ್ನೇಹಿತರೆಲ್ಲರೂ ಭಾಗವಹಿಸಿದ ಕ್ಷಣ ಅದಾಗಿತ್ತು. ಪೂಜಾ ಕಾರ್ಯ ನೆರವೇರಿಸಿ ಅಶ್ವಥ್ ನಾರಾಯಣನಲ್ಲಿ ಹರಕೆ ಪ್ರಾರ್ಥನೆ ಮಾಡಿದ ಅರ್ಚಕರಾದ ಕುಂಭೇಶ್ವರದ ದತ್ತಾತ್ರೇಯ ಭಟ್ಟರಂತೂ ಅಶ್ವಥ್ ವೃಕ್ಷದ ಮಹಿಮೆಯ ಕಿರು ಉಪನ್ಯಾಸವನ್ನೇ ನೀಡಿ ಎಲ್ಲರ ಗಮನ ಸೆಳೆದರು ನನಗಂತೂ ಧಾರ್ಮಿಕ ಕಾರ್ಯಕ್ರಮಕ್ಕಿಂತೂ ಇದೊಂದು ನಿಸರ್ಗಾರಾಧನೆಯ ಕಾರ್ಯಕ್ರಮದಂತೆ ಭಾಸವಾಯ್ತು. ಅಶ್ವತ ಮರವಂತೂ ಆರೋಗ್ಯದ ವಿಷಯದಲ್ಲಿ ಅಮೃತವೇ ಸರಿ ! ಪುರಾತನರು ರೂಢಿಸಿದ ಆಚರಣೆಗಳೆಲ್ಲವೂ ಅನನ್ಯವಾದವು ಎಂದೆನಿಸಿ ಎಲ್ಲವನ್ನೂ ಪ್ರೀತಿಸು ಪೂಜಿಸು ಎಂದು ಕಾರ್ಯರೂಪದಲ್ಲಿ ತೋರಿಸಿಕೊಟ್ಟ ಸನಾತನ ಧರ್ಮ ವಾರಸುದಾರರಾಗುವ ಭಾಗ್ಯ ದೊರೆತಿರುವುದಕ್ಕೆ ಅಭಿಮಾನ ಎನಿಸಿತು.ಗಜಣ್ಣ ನುಡಿದಂತೆ ನಡೆದು ಆದರ್ಶರಾಗಿದ್ದಾರೆ.ಅದೆಷ್ಟೋ ಅಶ್ವಥ್ ಕಟ್ಟೆಗಳು ವಿನಾಶದ ಅಂಚಿಗೆ ತಲುಪಿರುವ ಹಂತದಲ್ಲಿ ನಿಜಕ್ಕೂ ಇದೊಂದು ಮಹಾನ್ ಯಜ್ಞವೇ ಎನಿಸಿತು.
ಮರುಕ್ಷಣವೇ ಅಭಿವೃದ್ಧಿಯ ನೆಪದಲ್ಲಿ ಚತುಷ್ಪಥ ರಸ್ತೆಗಾಗಿ ಹೆದ್ದಾರಿಯಲ್ಲಿ ಕಗ್ಗೊಲೆಗೀಡಾಗಿ ರಸ್ತೆಯಂಚಿನಲ್ಲಿ ಸಾಲುಸಾಲಾಗಿ ಒರಗಿರುವ ಹೆಮ್ಮರಗಳು ನೆನಪಾಗಿ ಕಣ್ಣಂಚು ತೇವಗೊಂಡಿತು.