ಬೆಂಗಳೂರು : ಕರಾವಳಿಯಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವ ಹೊಣೆಯನ್ನು ಮಾಜಿ ಡಿಸಿಎಂ ಅಶೋಕ್ ಹೆಗಲಿಗೆ ಹಾಕಲಾಗಿದೆ. ಬೆಂಗಳೂರಿನಿಂದ ಕಾರ್ಯಕರ್ತರನ್ನು ಕರೆದುಕೊಂಡು ಹೋಗುವುದರ ಪೂರ್ತಿ ಜವಾಬ್ದಾರಿಯನ್ನು ಅಶೋಕ್ ಅವರಿಗೆ ವಹಿಸಲಾಗಿದೆ.
ಕಾರ್ಯಕ್ರಮ ಯಶಸ್ಸುಗೊಳಿಸಬೇಕಾದ ಹಿನ್ನಲೆಯಲ್ಲಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಯ್ತು. ಸಭೆಯಲ್ಲಿ ಮಂಗಳೂರು ಚಲೋ ಯಶಸ್ವಿಗೊಳಿಸುವ ಕುರಿತು ಸಮಾಲೋಚನೆ ನಡೆದಿದ್ದು, ಬೆಂಗಳೂರು ನಗರದಿಂದ 3 ಸಾವಿರ ಬೈಕ್ ಮಂಗಳೂರಿಗೆ ತಗೆದುಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ.
10 ಸಾವಿರ ಕಾರ್ಯಕರ್ತರನ್ನು ಬೆಂಗಳೂರಿನಿಂದ ಕರೆದುಕೊಂಡು ಹೋಗಲು ತೀರ್ಮಾನಿಸಲಾಗಿದ್ದು, ಸೆಪ್ಟೆಂಬರ್ 5 ರಂದು ಬೆಂಗಳೂರು, ನೆಲಮಂಗಲ, ಕುಣಿಗಲ್ ಮಾರ್ಗವಾಗಿ ಹಾಸನದಲ್ಲಿ ವಾಸ್ತವ್ಯ ಹೂಡುವುದು. ಸೆಪ್ಟೆಂಬರ್ ೬ ರಂದು ಉಪ್ಪಿನಂಗಡಿಯಲ್ಲಿ ವಾಸ್ತವ್ಯ. ನಂತ್ರ ಮಂಗಳೂರಿಗೆ ಭೇಟಿ. ಹೋಗುವ ಮಾರ್ಗಗಳಲ್ಲಿ 10 ಕಡೆ ಸಭೆ ನಡೆಸಲು ನಿರ್ಧರಿಸಲಾಗಿದೆ.ಎಲ್ಲೆಲ್ಲಿ ಸಭೆ ನಡೆಸಬೇಕು ಅನ್ನುವುದನ್ನು ಜಿಲ್ಲಾಧ್ಯಕ್ಷರ ಜೊತೆ ಚರ್ಚಿಸಿದ ಬಳಿಕ ಅಂತಿಮಗೊಳಿಸಲು ಅಶೋಕ್ ನಿರ್ಧರಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಆರ್. ಅಶೋಕ್ ಕರಾವಳಿ ಭಾಗದಲ್ಲಿ ಕೋಮುಗಲಭೆಯಾಗಲು ರಮಾನಾಥ್ ರೈ ನೇರ ಕಾರಣ ಅಂತ ನಾವು ಹೇಳಿದ್ದೇವು. ನಾವು ರಮಾನಾಥ ರೈ ವಿರುದ್ಧ ಸಭೆ ನಡೆಸುತ್ತಿರುವ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಅವ್ರಿಗೆ ಗೃಹ ಖಾತೆ ಕೊಟ್ಟಿಲ್ಲ. ಹಾಗಂತ ನಾವು ಹೋರಾಟ ಕೈಬಿಡುವುದಿಲ್ಲ. ಮಗಳೂರು ಚಲೋ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ರಮಾನಾಥ ರೈ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದರು.