ಸಂಪನ್ನವಾದ ಮಾಘ ಗಾನೋತ್ಸವ ಮತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ

ಹೊನ್ನಾವರ : ತಾಲೂಕಿನ ಹೊಸಾಕುಳಿಯ ಮೇಲಿನಗಂಟಿಗೆ ಶ್ರೀಧರಾನುಗ್ರಹದಲ್ಲಿ ಭರವಸೆಯ ಬೆನ್ನೇರಿ ಎಂಬ ಶೀರ್ಷಿಕೆಯಲ್ಲಿ ಮಾಘ ಗಾನೋತ್ಸವ ಮತ್ತು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಸಂಪನ್ನವಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ, ಶಿಕ್ಷಕ ಸಂದೀಪ ಭಟ್ಟರವರ ಕೃತಿ “ನಿತ್ಯಗಾಮಿನಿ” ಹಾಗೂ “ನನಗೊಂದು ಭಾಷಣ ಬರೆದುಕೊಡ್ತೀರಾ ಟೀಚರ್” ಪುಸ್ತಕಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಚಂಡೆಯನ್ನು ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುಮಟಾದ ಸಂತೇಗುಳಿಯಲ್ಲಿ ಸಂದೀಪ ಭಟ್ಟರು ಶಿಕ್ಷಕರಾಗಿದ್ದಾಗ ಅವರ ಪರಿಚಯವಾಯಿತು, ಇಂದು ಅವರ ಪ್ರೀತಿಯ ಕರೆಗೆ ಇಲ್ಲಿಗೆ ಬಂದಿದ್ದೇನೆ. ಪುಸ್ತಕ ಬರೆದವರು ಶ್ರೀಮಂತರಾಗುವುದು ಕಷ್ಟ, ಹಣಕ್ಕಾಗಿ ಸಾಹಿತ್ಯವಲ್ಲ ಆದರೂ ಸಂದೀಪರ ಸಾಹಿತ್ಯ ಸೇವೆ ಮೆಚ್ಚುವಂತಹುದು ಎಂದರು. ಯಕ್ಷಗಾನ ನೃತ್ಯ, ಚಂಡೆ ವಾದನ, ಜಾನಪದ ನೃತ್ತದ ಮೂಲಕ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಿದ್ದಾರೆಂದು ಅವರು ಅಭಿಪ್ರಾಯಪಟ್ಟರು.

ದಿಕ್ಸೂಚಿ ಮಾತನ್ನಾಡಿದ ಉಪನ್ಯಾಸಕ ಜಿ.ಎಲ್ ಹೆಗಡೆಯವರು ಜೀವನವೇ ನಿತ್ಯಗಾಮಿನಿಯಾಗಿದೆ, ಬದಲಾಗುವ ಬದುಕಿನಲ್ಲಿ ಸಾಹಿತ್ಯವೇ ಜೀವಾಳವಾಗಬೇಕು ಎಂದರು. ಪುಸ್ತಕವನ್ನು ಮೊಬೈಲ್ ಒಳಗೆ ಅಡಕಮಾಡುವ ಕಾರ್ಯ ನಡೆದಿದೆ ಆದರೆ ಪುಸ್ತಕದ ಬದಲು ಮೊಬೈಲ್ ಅಲ್ಲ, ಪುಸ್ತಕದ ಸಾಹಿತ್ಯ ಮಸ್ತಕಕ್ಕೆ ಸೇರಬೇಕು ಸಾಹಿತ್ಯ ಚಿರಂತನವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಐಪಿಎಲ್ ಬೆಟ್ಟಿಂಗ್ : 10 ಜನರು ಪೊಲೀಸ್ ವಶಕ್ಕೆ

ವೈದ್ಯರಾದ ಡಾ. ಜಿ.ಜಿ ಹೆಗಡೆಯವರು ಮಾತನಾಡಿ ಉತ್ತರಕನ್ನಡಕ್ಕೆ ಬಂದವರು ನಿಮ್ಮೂರಲ್ಲಿ ಏನಿದೆ? ಎಂದು ಪ್ರಶ್ನಿಸುತ್ತಾರೆ ಆದರೆ ಸಂದೀಪ ಭಟ್ಟರಂತಹ ಸಾಹಿತಿಗಳು ಇದ್ದಾರೆ ಎಂಬುದನ್ನು ಹೆಮ್ಮೆಯಿಂದ ತೋರಿಸುತ್ತೇವೆ. ಸಾಹಿತ್ಯ ಮುಂದಿನ ಬದಿಕಿಗೆ ದಾರಿದೀಪ, ಸಂದೀಪರಂತಹ ಸಾಹಿತಿಗಳು ಈ ಮಣ ್ಣನ ಘನತೆ ಹೆಚ್ಚಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಮಾತನಾಡಿ ಸಂದೀಪ ಭಟ್ಟ ಸಮಾಜಕ್ಕೊಂದು ಕೊಡುಗೆಯಾಗಿದ್ದಾರೆ. ಮನೆಯ ಹೆಸರು ಉಳಿಸುವ ಹಾಗೂ ಶಿಕ್ಷಕನಾಗಿ ಮಕ್ಕಳ ಜೀವನದಲ್ಲಿ ಪ್ರಭಾವ ಬೀರಬಲ್ಲ ಅತ್ಯುತ್ತಮ ವಾಗ್ಮಿ, ಸಾಹಿತಿ ಇವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಪತ್ರಕರ್ತರಾದ ಜಿ.ಯು ಭಟ್ಟ ಮಾತನಾಡಿ ಮೇಲಿನಗಂಟಿಗೆ ಕುಟುಂಬವೇ ಆತಿಥ್ಯಕ್ಕೆ ಹೆಸರಾಗಿರುವುದು. ದೇವರು ಪ್ರತಿಯೊಬ್ಬರಿಗೂ ಪ್ರತಿಭೆ ನೀಡಿದ್ದಾನೆ. ದೇವರು ನೀಡಿದ ಪ್ರತಿಭೆಯನ್ನು ಸಮಾಜಕ್ಕೆ ನೀಡುವವನು ಸಮಾಜದ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಸಮಾಜಕ್ಕೆ ಮಾದರಿಯಾಗಿ ಬದುಕುವ ಕಾರ್ಯ ಇಂದಿನ ಅಗತ್ಯತೆ ಎಂದರು.

ಸಾಹಿತಿ ಶ್ರೀಪಾದ ಶೆಟ್ಟಿ ಸಾಹಿತ್ಯದ ಪ್ರಭಾವದ ಬಗ್ಗೆ ಮಾತನಾಡಿದರೆ, ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಸಂದೀಪರ ಸಾಹಿತ್ಯಾಸಕ್ತಿಯನ್ನು ಸಭೆಗೆ ವಿವರಿಸಿದರು. ಬಸವರಾಜ ಚಿತ್ರದುರ್ಗ, ಮುರ್ಡೇಶ್ವರದ ಯಕ್ಷರಕ್ಷೆಯ ಅಧ್ಯಕ್ಷ ಐ.ಆರ್ ಭಟ್ಟ, ಹೊನ್ನಾವರ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ ನಾಯ್ಕ ಶುಭಾಶಯದ ನುಡಿಗಳನ್ನು ಆಡಿದರು.

RELATED ARTICLES  ಗದ್ದೆಗಳಿಗೆ ಕಾಡು ಹಂದಿಗಳ ಕಾಟ: ಕಂಗಾಲಾಗಿದ್ದಾರೆ ಅನ್ನದಾತರು.

ಭಾರತೀಯ ಕಿಸಾನ್ ಸಂಘದ ಉತ್ತರ ಕನ್ನಡದ ಜಿಲ್ಲಾ ಅಧ್ಯಕ್ಷರು ಹಾಗೂ ಸಭೆಯ ಅಧ್ಯಕ್ಷರೂ ಆಗಿದ್ದ ಅಧ್ಯಕ್ಷ ಶಿವರಾಂ ಗಾಂವ್ಕರ್ ಮಾತನಾಡಿ, ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾಯಕ ಮಾಡುತ್ತಿರುವವರು ಸಾಹಿತಿಗಳು, ಜ್ಞಾನ ಹಂಚುವ ಕಾರ್ಯ ಮಾಡಲು ಸಾಹಿತ್ಯ ಬೇಕು, ಸುಜ್ಞಾನ ಕಡಿಮೆಯಾದಾಗ ವಿಕಾರ ಜ್ಞಾನ ಜಗತ್ತು ಆವರಿಸುತ್ತದೆ. ವಿಜ್ಞಾನದ ಪ್ರಭಾವದಿಂದ ಸಾಹಿತ್ಯ ಮಾಸಿದೆ, ಮುಂದಿನ ಸಮಾಜಕ್ಕೆ ಓದುವ ಜ್ಞಾನ ಕೊಡಲು ಸಾಹಿತ್ಯ ಅಗತ್ಯವಾಗಿದೆ. ಸಂದೀಪ ಭಟ್ಟರ ಈ ಸಾಹಿತ್ಯ ಸೇವೆ ಸ್ಥುತ್ಯಾರ್ಹವಾಗಿದೆ ಎಂದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಗಾಯಕ ಶಿವರಾಂ ಭಾಗವತ, ಚಿನ್ಮಯ ಭಟ್ಟ, ಲಕ್ಷ್ಮೀ ಹೆಗಡೆ ಮಾಘ ಗಾನೋತ್ಸವ ನಡೆಸಿಕೊಟ್ಟರು.ಶೇಷಾದ್ರಿ ಅಯ್ಯಂಗಾರ, ಅಕ್ಷಯ ಭಟ್ಟ ತಬಲಾದಲ್ಲಿ ಸಹಕರಿಸಿದರೆ, ಗೌರೀಶ ಯಾಜಿ ಸಂವಾದಿನಿಯಲ್ಲಿ ಸಾತ್ ನೀಡಿದರು.

ಖ್ಯಾತ ಸಂಗೀತ ಕಲಾವಿದರ ಬಹಳ ಅಪರೂಪದ ಗಾಯನ ರಸಾಯನ, ಅರಳು ಪ್ರತಿಭೆ ಕು. ಮಯೂರ ಹೆಗಡೆ ಚಂಡೆಯ ವಾದನ, ಯಕ್ಷನೃತ್ಯ ಮಾಡಿದ ಅನನ್ಯಾ ರಾಜು ಶೆಟ್ಟಿ, ಗರಡಿಬೈಲ್ ಶಾಲೆಯ ವಿದ್ಯಾರ್ಥಿಗಳ ಜಾನಪದ ನೃತ್ಯ ಎಲ್ಲರ ಗಮನ ಸೆಳೆಯಿತು. ಲೇಖಕ ಸಂದೀಪ ಭಟ್ಟ ಎಲ್ಲರನ್ನೂ ಸ್ವಾಗತಿಸಿದರು. ಗಣೇಶ ಜೋಶಿ ಪುಸ್ತಕ ಪರಿಚಯಿಸಿದರು. ಡಿ.ಜಿ ಪಂಡಿತ ಪುಸ್ತಕದ ಓದಿನ ಮಹತ್ವ ತಿಳಿಸಿದರು. ಜಿ.ಆರ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.