ಕುಮಟಾ: ‘ವಿದ್ಯಾರ್ಥಿಗಳ ಜ್ಞಾನ ದಾಹ ನೀಗಿಸಿ ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರಗಳ ಭವಿಷ್ಯದ ಮೇಲೆ ಪ್ರತ್ಯಕ್ಷ ಪ್ರಭಾವ ಬೀರುವವನೇ ಶಿಕ್ಷಕ. ಅವನೇ ನಿಜವಾದ ನಾಲೇಡ್ಜ್ ವಾರಿಯರ್ ಆಗಿದ್ದಾನೆ’ ಎಂದು ವಿಶ್ರಾಂತ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಇಂಟರ್ನಲ್ ಕ್ವಾಲಿಟಿ ಅಸ್ಯೂರನ್ಸ್ ಸೆಲ್ ಅಡಿಯಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯ ಅಂಗವಾಗಿ ಹಮ್ಮಿಕೊಂಡ ಗೂಗಲ್ ಮೀಟ್ ಡಿಜಿಟಲ್ ಸಂವಹನದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ ಸಿ.ವಿ.ರಾಮನ್‍ರು ಹೊಂದಿದ್ದ ವಿಜ್ಞಾನ ಕೌತುಕಗಳ, ನಡೆಸಿದ ಸಂಶೋಧನೆಗಳ, ಜೀವನ ಚರಿತ್ರೆಯ ಸ್ಥೂಲ ಚಿತ್ರವನ್ನು ಶಿಕ್ಷಣಾರ್ಥಿಗಳಿಗೆ ಪುನರ್ಮನನ ಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ.ಪ್ರೀತಿ ಭಂಡಾರಕರ ಮುಖ್ಯವಾಗಿ ವಿಜ್ಞಾನ ಶಿಕ್ಷಕರನ್ನುದ್ದೇಶಿಸಿ ಏರ್ಪಡಿಸಿದ್ದ ವೆಬ್ ಸೆಮಿನಾರ್ ರಜಾ ಅವಧಿಯಲ್ಲೂ ಶಿಕ್ಷಕವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಒದಗಿಸಿದ್ದು, ವೈಜ್ಞಾನಿಕ ಮನೋಭಾವ ಬೆಳೆಯಲು ಕಾರಣವಾಗಿದೆ ಎಂದರು. ಹಿರಿಯ ಉಪನ್ಯಾಸಕ, ಸೆಲ್ ಸಂಚಾಲಕ ಡಾ.ಜಿ.ಪಿ.ಶೇಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.