ಶಿರಸಿ: ರಾಜ್ಯದಲ್ಲಿ ಮೀಸಲಾತಿಯ ಗೊಂದಲವಿದೆ. ದೊಡ್ಡ ಸಮುದಾಯಗಳು ಮೀಸಲಾತಿ ಲಾಭ ಪಡೆದುಕೊಳ್ಳುವುದರಿಂದ ಸಣ್ಣ ಸಮುದಾಯದ ಮೇಲೆ ಪರಿಣಾಮವಾಗುತ್ತದೆ. ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ನೋಡಿಕೊಳ್ಳಬೇಕಿದೆ ಎಂದು ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನುಡಿದರು.
ಸ್ವರ್ಣವಲ್ಲೀಯಲ್ಲಿ ಸೋಮವಾರ ಹಮ್ಮಿಕೊಂಡ ಪೀಠಾರೋಹಣದ ತ್ರಿದಶಮಾನೋತ್ಸವ ಹಾಗೂ ವಿದ್ಯಾ ಭವನ ಲೋಕಾರ್ಪಣಾ ಸಮಾರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಮೀಸಲಾತಿ ಅತಿ ಆದರೆ ಅಪಾಯ. ಇದರಿಂದ ಸಣ್ಣ ಸಮುದಾಯದ ಪ್ರತಿಭಾಶಾಲಿಗಳಿಗೆ ಅನ್ಯಾಯವಾದಂತಾಗುವುದು. ಪ್ರತಿಭೆಯಿದ್ದರೂ ಅವಕಾಶವಿಲ್ಲದಾಗಬಹುದು ಎಂದರು.
ಪಶ್ಚಿಮ ಘಟ್ಟದ ನೀರು ಬಯಲು ಸೀಮೆಗೆ: ನದಿ ನೀರು ಬಯಲು ಸೀಮೆಗೆ ಒಯ್ಯುವ ಪ್ರಸ್ತಾಪ ಕೇಳಿ ಬರುತ್ತಿದೆ. ಇದು ನದಿ ತಿರುವಲ್ಲ ಎನ್ನುತ್ತಾರೆ. ಉತ್ತರ ಕರ್ನಾಟಕಕ್ಕೆ ಪಶ್ಚಿಮ ಘಟ್ಟದ ನೀರು ಒಯ್ದರೆ ಇಲ್ಲೂ ಅಪಾಯವಾಗಿ, ಅಲ್ಲೂ ನೀರಿಲ್ಲದಂತೆ ಆಗುತ್ತದೆ. ಕರಾವಳಿ ಭಾಗದಲ್ಲಿ ಕೃಷಿಗೆ ಹೊಡೆತ ಬೀಳಲಿದ್ದು, ಮೀನುಗಾರರಿಗೂ ಸಮಸ್ಯೆ ಆಗುತ್ತದೆ. ಹಾಗಂತ ಅವರಿಗೂ ತೊಂದರೆಯಾಗಬಾರದು. ಬೇರೆಯಾವುದಾದರೂ ವಿಧಾನದಲ್ಲಿ ನೀರನ್ನು ಪಡೆದುಕೊಳ್ಳುವ ವಿಧಾನವಾಗಲಿ. ಆ ಬಗ್ಗೆ ಸರ್ಕಾರವೂ ಪರಿಶೀಲನೆ ನಡೆಸಬೇಕು ಎಂದರು.
ಮೂರು ದಶಕದ ಹಿಂದೆ ಪೀಠಾರೋಹಣದ ವೇಳೆಯಲ್ಲಿ ಬೇಡ್ತಿ ಆಣೆಕಟ್ಟಿನ ವಿರುದ್ಧ ಧ್ವನಿ ಎತ್ತುವ ಮೂಲಕ ಹಸಿರು ಸ್ವಾಮೀಜಿ ಎಂದು ಹೆಸರಾಗಿದ್ದ, ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಪೀಠಾರೋಹಣಗೊಂಡ ತ್ರಿದಶಕದ ಸಮಾರಂಭದಲ್ಲಿ ಪಶ್ಚಿಮ ಘಟ್ಟಕ್ಕೆ ಅಪಾಯವಾದ ಈ ಸಂಗತಿಯ ಬಗ್ಗೆ ಧ್ವನಿ ಎತ್ತಿದರು. ಆದ್ದರಿಂದ ಮಾ.24 ಕ್ಕೆ ಶಿರಸಿ ಟಿಎಮ್‌ಎಸ್ ಸಭಾಭವನದಲ್ಲಿ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ, ಎಲ್ಲರೂ ಆಗಮಿಸಬೇಕೆಂದು ನುಡಿದರು.
ತ್ರಿದಶಮನೋತ್ಸವ ಉದ್ಘಾಟಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಂಕರರು, ವಿವೇಕಾನಂದರ ಕಾರಣದಿಂದ ಭಾರತದಲ್ಲಿ ಸನಾತನ ಶಕ್ತಿ ಉಳಿದಿದೆ. ಹಸಿರು ಸ್ವಾಮೀಜಿಯಾಗಿ, ಆಧ್ಯಾತ್ಮ ಶಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಭಗವದ್ಗೀತಾ ಅಭಿಯಾನ ದೇಶಾದ್ಯಂತ ನಡೆಸಿ ಗಮನ ಸೆಳೆದಿದ್ದಾರೆ. ಶ್ರೀಗಳ ಸಂಕಲ್ಪ ಕಾರ್ಯಕ್ರಮ ನಾವು ನಡೆಸಬೇಕು ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮ ನಡೆಸಿದ ಆರೋಗ್ಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಮಾತನಾಡಿ, ಪ್ರಾಚೀನ ನಾಗರೀಕತೆ ಭಾರತದ್ದು. ಭಾರತದ ಆಧ್ಯಾತ್ಮಿಕ, ಸಂಸ್ಕೃತಿ ತೂರಿ ಹೋಗುವ ಕಾಲದಲ್ಲಿ ಶಂಕರಾಚಾರ್ಯರು ಮರಳಿ ತೋರಿಸಿದರು. ಸನಾತನ ಧರ್ಮ ಪ್ರತಿಷ್ಠಾಪಿಸಿದರು. ಅದರ ಪರಿಣಾಮ ಇಂದೂ ಇದು ಬೆಳೆದಿದೆ. ಅದಕ್ಕೆ ಇಂಥ ಮಠ ಮಾನ್ಯಗಳು, ಶ್ರೀಗಳು ಕಾರಣ. ಕಠೋರ ತಪಸ್ಸಿನಿಂದ ಗಮನ ಸೆಳೆದವರು ಶ್ರೀಗಳು. ಹಿಂದೂ ಧರ್ಮ ಸತ್ಯ ಶೋಧನೆಯ ಧರ್ಮ. ಎಲ್ಲ ಧರ್ಮ ಸೇರಿಕೊಂಡು ಹೋಗುವ ಧರ್ಮ ಹಿಂದೂ ಧರ್ಮ. ಭಾರತೀಯರ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಭಾರತದಲ್ಲಿದೆ. ಈ ಕಾರಣದಿಂದ ಪ್ರಪಂಚದಲ್ಲಿ ಹಿಂದೂ ಧರ್ಮ ವಿಶೇಷವಾಗಿದೆ. ಮೂಢ ನಂಬಿಕೆಯಧರ್ಮ ಅಲ್ಲ ಎಂದರು.
ಆರೋಗ್ಯ ಶಿಕ್ಷಣದಲ್ಲೂ ಸಮನ್ವಯ ಸಾಧಿಸಬೇಕು. ಅಲೋಪತಿಯಷ್ಟೇ ಆಯುರ್ವೇದವೂ ಇದೆ. ಕೊರೊನಾ ಮುಕ್ತವಾಗಿಸಲು ಶಕ್ತಿಕೊಡಬೇಕು ಎಂದರು.
ವಿದ್ಯಾ ಭವನವನ್ನು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ ಸಮಾಜ ಕಟ್ಟಲು ಆಧ್ಯಾತ್ಮಿಕ ಸಾಧಕರ ಮಾರ್ಗದರ್ಶನ ಅಗತ್ಯವೆಂದು ಹೇಳಿದರು. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ ಮೀಸಲಾತಿ ಜಾತಿ ಆಧಾರವಲ್ಲ, ಆರ್ಥಿಕ ಸ್ಥಿತಿ ಆಧಾರದಲ್ಲಿ ನೀಡಬೇಕು ಎಂದು ಶ್ರೀಗಳ ಮಾತಿಗೆ ಧ್ವನಿಗೂಡಿಸದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅನಂತ ಅಶೀಸರ, ಪ್ರಮೋದ ಹೆಗಡೆ, ಶಾಂತಾರಾಮ ಸಿದ್ದಿ, ಜಯಶ್ರೀ ಮೊಗೇರ, ಜಿ.ಎನ್.ಹೆಗಡೆಮುರೇಗಾರ್, ನರಸಿಹ ಬಕ್ಕಳ, ಮಮತಾ ಜೈನ್, ರಾಮಚಂದ್ರ ಹೆಗಡೆ, ಕುಮದ್ವತಿ ಗುಡಿಗಾರ ಇತರರು ಇದ್ದರು.
ಶ್ರೀ ರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವೇದಘೋಷ ನಡೆಸಿದರು. ಶ್ರೀದೇವಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಎಡನೀರು ಮಠದಿಂದ ಹಾಗೂ ಸ್ವರ್ಣವಲ್ಲೀ ಪ್ರತಿಷ್ಠಾನದ ಉಪಾಧ್ಯಕ್ಷ ಜಿ.ಎನ್.ಹೆಗಡೆ ಹೀರೇಸರ ಫಲ ಸಮರ್ಪಿಸಿದರು. ಎನ್.ಜಿ ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಆರ್.ಎಸ್.ಹೆಗಡೆ ಭೈರುಂಬೆ ವಂದಿಸಿದರು. ಅನಂತ ಭಟ್ಟ ಹುಳಗೋಳ ನಿರ್ವಹಿಸಿದರು. ಮಾತೆಯರು ನಡುನಡುವೆ ಸ್ತೋತ್ರ ಪಠಿಸಿದರು.
ಇದೇ ವೇಳೆ ಸಾಧಕರಾದ ವಿದ್ವಾನ್ ಬಂದಗದ್ದೆ ನಾಗರಾಜ್ ಭಟ್ಟ, ಸಿ.ವಿ.ಗೋಪಿನಾಥ, ಸತ್ಯನಾರಾಯಣ ಹೆಗಡೆ ಹಾಲಕಣಿ ಅವರನ್ನು ಬಿರುದು ನೀಡಿ ಗೌರವಿಸಲಾಯಿತು. ನೂತನ ಕಟ್ಟಡ ನಿರ್ಮಾಣ ಸಹಕಾರ ನೀಡಿದ ತಿಮ್ಮಪ್ಪ ಭಟ್ಟ, ಎಂ.ಎನ್.ಹೆಗಡೆ ಸಂಪೆಕಟ್ಟೆ, ಶ್ಯಾಮಸುಂದರ ಭಟ್ಟ ಕಾಜಿನಮನೆ, ವಿ.ಎನ್.ಹೆಗಡೆ ಬೊಮ್ಮನಳ್ಳಿ, ಮಹಾದೇವ ಹೆಗಡೆ ಗಡೀಕೈ, ರಾಮಚಂದ್ರ ಹೆಗಡೆ ಕೆಶಿನ್ಮನೆ, ಉಲ್ಲಾಸ ನಾಯ್ಕ ಅವರನ್ನು, ದಾನಿಗಳನ್ನು ಗೌರವಿಸಲಾಯಿತು.
Source : EUttarakannada