ಭಟ್ಕಳ- ಮೈಸೂರು ಕಲಾಮಂದಿರದ ಮನೆಯಂಗಳ ಸಭಾಭವನದಲ್ಲಿ ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿಯವರಿಗೆ ಇಂದು ಕರುನಾಡು ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಡ್ಯದ ಪ್ರತಿಷ್ಠಿತ ಕರುನಾಡು ಸೇವಾ ಟ್ರಸ್ಟ್ ಇಂದು ಮೈಸೂರಿನ ಕಲಾಮಂದಿರದ ಮನೆಯಂಗಳ ಸಭಾಭವನದಲ್ಲಿ ರಾಜ್ಯದ ವಿವಿದ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರುನಾಡ ಸಾಧಕರತ್ನ ೨೦೨೧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಉತ್ತರ ಕನ್ನಡ ಜಿಲ್ಲೆಯಿಂದ ಸುಮಾರು ಹದಿನೇಳು ವರ್ಷಕ್ಕೂ ಹೆಚ್ಚುಕಾಲ ಸಾಹಿತ್ಯ ಸಂಗೀತ ಸಂಘಟನೆ ಪ್ರಕಾಶನ ಹೀಗೆ ಹಲವು ರಂಗಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡು ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿಯವರನ್ನು ಗುರುತಿಸಿ ಕರುನಾಡು ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಕರುನಾಡು ಸೇವಾ ಟ್ರಸ್ಟ್ ಮಂಡ್ಯದ ಪರವಾಗಿ ನಾಡಿನ ಹೆಸರಾಂತ ಹಿರಿಯ ಸಾಹಿತಿ ರಂಗಕರ್ಮಿ ಮಾ.ಚಿ.ಕೃಷ್ಣ ಹಾಗೂ ಪ್ರಸಿದ್ಧ ಕವಿ ವಿಮರ್ಶಕ ಡಾ.ಜಯಪ್ಪ ಹೊನ್ನಾಳಿ ಯವರು ಮುಂಡಳ್ಳಿ ಯವರಿಗೆ ಸಾಲು ಹೊದಿಸಿ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕವಿ ಮಾ.ಚಿ.ಕೃಷ್ಣರವರು ಉಮೇಶ ಮುಂಡಳ್ಳಿ ಕೇವಲ ಕವಿಯಷ್ಟೇ ಅಲ್ಲ ಕೇವಲ ಗಾಯಕನಷ್ಟೇ ಅಲ್ಲ, ಬದಲಾಗಿ ಸಾಹಿತ್ಯ ಸಂಗೀತ ಎರಡೂ ಮೇಳೈಸಿರುವ ಒಂದು ಅದ್ಬುತ ಪ್ರತಿಭೆ.ಈ ಪ್ರತಿಭೆ ಒಂದೇ ಕಡೆ ಸೀಮಿತವಾಗದೆ ಕರ್ನಾಟಕದ ಉದ್ದಗಲಕ್ಕೂ ಬೆಳಗಬೇಕಾದಂತದ್ದು. ಈ ದಿಸೆಯಲ್ಲಿ ಈ ಪ್ರತಿಭೆಯನ್ನು ಗುರುತಿಸಿದ ಕರುನಾಡ ಟ್ರಸ್ಟ್ ನ ಕಾರ್ಯ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.ತಮ್ಮ ಸಂಘಟನೆ ಬೆಂಗಳೂರಿನಲ್ಲಿ ಈ ಪ್ರತಿಭೆಯನ್ನು ಗುರುತಿಸುವುದಾಗಿಯೂ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಸಿದ್ದ ಕವಿ ವಿಮರ್ಶಕ ಡಾ.ಜಯಪ್ಪ ಹೊನ್ನಾಳಿಯವರು ಸಂಘಟನೆ ಬಗ್ಗೆ ಮೆಚ್ಚುಗೆ ಮಾತನಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಮೇಶ ಮುಂಡಳ್ಳಿ ಯಾವುದೇ ಫತಿಫಲ ನರೀಕ್ಷಿಸದೇ ತಮ್ಮ ಕಾರ್ಯ ತಾವು ಮಾಡುತ್ತ ಸಾಗಿದ್ದಲ್ಲಿ ಒಳಿತು ಒಂದಲ್ಲ ಒಂದು ದಿನ ನಮ್ಮ ಕೈಹಿಡಿಯಬಲ್ಲದು.ಅದಕ್ಕೆ ನಾನು ಇಂದು ಸಾಕ್ಷಿಯಾಗಿ ನಿಂತಿದ್ದೇನೆ ಎಂದು ನುಡಿದರು.
ವೇದಿಕೆಯಲ್ಲಿ ಮೈಸೂರು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ, ಸಮಾಜ ಸೇವಕ ಡಾ.ರೇಣುಕಾಪ್ರಸಾದ್ ಎಸ್.ಆರ್., ನಿವೃತ್ತ ನೌಕರ ಸಂಘದ ರಾಜ್ಯಾಧ್ಯಕ್ಷ ಡಾ.ಓಬಯ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕರುನಾಡ ಸೇವಾ ಟ್ರಸ್ಟ್ ಅಧ್ಯಕ್ಷ ಅಭಿನಂದನ್ ಎಂ ಅವರು ಎಲ್ಲರೂ ಸ್ವಾಗತಿಸಿ ವಂದಿಸಿದರು.