ಶಿರಸಿ: ತಾಲೂಕಿನ ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾರ್ಚ 8 ರಂದು ಕೋವಿಡ್ 19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಹೆಗಡೆಕಟ್ಟಾ ಸೊಸೈಟಿ ಅಧ್ಯಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಸಮಿತಿ ಸದಸ್ಯ ಎಂ.ಪಿ.ಹೆಗಡೆ ಕೊಟ್ಟೆಗದ್ದೆ, ಶ್ರೀ ಗಜಾನನ ಸೆಕೆಂಡರಿ ಸ್ಕೂಲ ಅಧ್ಯಕ್ಷ ಎಂ ಆರ್ ಹೆಗಡೆ ಹೊನ್ನೆಕಟ್ಟಾ, ಗಣ್ಯರು ದೀಪ ಬೆಳಗಿಸುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಎಂ ಪಿ ಹೆಗಡೆ ಕೊಟ್ಟೆಗದ್ದೆ ಮಾತನಾಡಿ ಗ್ರಾಮೀಣ ಭಾಗದಲ್ಲಿ ಲಸಿಕಾ ಅಭಿಯಾನದ ಆರಂಭ ಸಂತಸ ತಂದಿದೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಲಸಿಕೆ ಅಭಿಯಾನ ಆರಂಭಿಸಲಾಗಿದೆ ನಿಯಮಗಳ ಅನ್ವಯ ಸಾರ್ವಜನಿಕರು ಸಹಕರಿಸಬೇಕು, ಲಸಿಕೆ ಬಗ್ಗೆ ಯಾವುದೇ ಭಯ ಬೇಡ ಎಂದರು. ಎರಡನೆಯ ಹಂತದಲ್ಲಿ ಅರವತ್ತು ವರ್ಷ ಮೇಲ್ಪಟ್ಟವರಿಗೆ ಮತ್ತು ನೊಂದಣ ಮಾಡಲಾದ ನಲವತ್ತೈದರಿಂದ ಐವತ್ತೊಂಭತ್ತು ವರ್ಷ ವಯಸ್ಸಿನ ಸಾರ್ವಜನಿಕರಿಗೆ ನೀಡಲಾಗುತ್ತಿದೆ.
ಸಾರ್ವಜನಿಕರು ಲಸಿಕೆ ತೆಗೆದುಕೊಳ್ಳಲು ತಮ್ಮ ಸ್ವಂತ ಮೊಬೈಲ ಮೂಲಕ, ನೆಮ್ಮದಿ ಕೇಂದ್ರದ ಮೂಲಕ ಇಲ್ಲವೇ ನೇರವಾಗಿ ಆಸ್ಪತ್ರೆಗೆ ಬಂದು ನೊಂದಣ ಮಾಡಿಕೊಳ್ಳಬಹುದು. ಮೊದಲ ಲಸಿಕೆ ತೆಗೆದುಕೊಂಡ ನಂತರ ಇಪ್ಪತ್ತೆಂಟನೆಯ ದಿನಕ್ಕೆ ಎರಡನೆ ಲಸಿಕೆ ಪಡೆಯಬೇಕು. ನೊಂದಣ ಯಾಗುವ ಸಮಯದಲ್ಲಿ ಸಾರ್ವಜನಿಕರು ತಮ್ಮ ಗುರುತಿನ ಚೀಟಿಯಲ್ಲಿ 60 ವರ್ಷ ಮೇಲ್ಪಟ್ಟ ದಾಖಲೆ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಯೇ ನೊಂದಣ ಮಾಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ. ಹರಮ್ ಸುಲ್ತಾನಾ ಹೇಳಿದರು. ಲಸಿಕೆ ಪಡೆದು ಎಂ.ಪಿ.ಹೆಗಡೆ ಕೊಟ್ಟೆಗದ್ದೆ ಲಸಿಕೆ ಪಡೆಯಲು ಬಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಮಹಾಲಕ್ಷ್ಮಿ ಹೆಗಡೆ ಸ್ವಾಗತಿಸಿ ವಂದಿಸಿದರು.