ಯಲ್ಲಾಪುರ: ಧರೆಯ ಮಣ್ಣು ತೆರೆಯುತ್ತಿದ್ದಾಗ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ತಾಲೂಕಿನ ಇಡಗುಂದಿ ಗ್ರಾಮದಲ್ಲಿ ನಡೆದಿದೆ.
ಇಡಗುಂದಿಯ ಮಂಜುನಾಥ್ ನಾಗಪ್ಪ ಭಟ್ ಎಂಬುವವರ ತೋಟಕ್ಕೆ ಮಣ್ಣಿನ ಕೆಲಸಕ್ಕೆ ಹೊಸಳ್ಳಿ ಗ್ರಾಮದಿಂದ ಏಳು ಜನ ಕೂಲಿ ಕಾರ್ಮಿಕರು ತೆರಳಿದ್ದ ಈ ವೇಳೆ ಧರೆಯ ಮಣ್ಣು ಕುಸಿದು, ನಾಲ್ಕು ಜನ ಮಣ್ಣಿನಲ್ಲಿ ಹೂತು ಸಾವು ಕಂಡಿದ್ದಾರೆ.
ಕಿರುವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀಯಡಗೆ-21, ಲಕ್ಷ್ಮೀ ಡೋಯಿಪಡೆ-38 ಸಂತೋಷ್ ಡೋಯಿಪಡೆ-18 ಮಾಳು ಡೋಯಿಪಡೆ-21 ಧರೆಯ ಮಣ್ಣು ಕುಸಿದು ಸಾವನ್ನಪ್ಪಿದವರಾಗಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಣ್ಣಾದಳು ಮದುಮಗಳು
ಸಾವನ್ನಪ್ಪಿದವರಲ್ಲಿ ಹುಡಗನ ಮನೆಯವರೊಂದಿಗೆ ಮದುವೆ ಮಾತುಕತೆ ನಡೆಸಿಕೊಂಡು ಬಂದಿದ್ದ ಭಾಗ್ಯಶ್ರೀ ಎಂಬ ಯುವತಿ ಕೂಡಾ ಒಬ್ಬಳು. ಈ ದುರಂತ ಸಂಭವಿಸಿದ ದಿನದಂದೆ ಸಾವನ್ನಪ್ಪಿದ ಭಾಗ್ಯಶ್ರೀ ಎಂಬುವವರ ಮದುವೆ ಮಾತುಕತೆಯನ್ನು ಕುಟುಂಬಸ್ಥರು ಕೊಲ್ಲಾಪುರದ ಹುಡುಗನ ಮನೆಗೆ ತೆರಳಿ ಮುಗಿಸಿ ಬಂದಿದ್ದರು. ಏಪ್ರಿಲ್ ನಲ್ಲಿ ಮದುವೆಗೆ ದಿನ ನಿಗದಿಪಡಿಸಿದ್ದಲ್ಲದೇ, ಆಕೆಯ ಮದುವೆಗಾಗಿ ಆಭರಣಗಳನ್ನೂ ಖರೀದಿಸಿಟ್ಟಿದ್ದರು ಎನ್ನಲಾಗಿದೆ.
ಆಸ್ಪತ್ರೆ ಮುಂದೆ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ. ಹೊಟ್ಟೆಪಾಡಿಗಾಗಿ ಕೂಲಿಗೆ ತೆರಳಿದ ಮಕ್ಕಳು, ಮದುವೆ ನಿಶ್ಚಯವಾದ ಯುವತಿ ಸೇರಿ ನಾಲ್ವರು ಅಮಾಯಕರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಬಡಕೂಲಿ ಕಾರ್ಮಿಕರ ಕುಟುಂಬದವರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕಿದೆ.