ಗೋಕರ್ಣ: ಪುರಾಣ ಪ್ರಸಿದ್ಧವಾದ ಗೋಕರ್ಣದಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಉತ್ಸವದ ನಿಮಿತ್ತ ಮಾ. 11, 12 ಹಾಗೂ 14ರಂದು ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗೋಕರ್ಣದಲ್ಲಿ ಮಾ. 7 ರಿಂದ 15 ರವರೆಗೆ ಒಂಬತ್ತು ದಿವಸ ಮಹಾಶಿವರಾತ್ರಿ ನಡೆಯಲಿದ್ದು, ಮಾ. 14ರಂದು ಮಹಾ ರಥೋತ್ಸವ ನಡೆಯಲಿದೆ. ಈ ಉತ್ಸವದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಜ್ಯದ ವಿವಿಧ ಕಡೆಗಳಿಂದ ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗೋಕರ್ಣಕ್ಕೆ ಆಗಮಿಸಲಿದ್ದಾರೆ. ಆದ್ದರಿಂದ ಈ ಸಮಯದಲ್ಲಿ ಸಾರ್ವಜನಿಕರ ಹಿತ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಗೋಕರ್ಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ. 11, 12 ಹಾಗೂ 14ರಂದು ಬಾರ್ ಹಾಗೂ ವೈನ್ ಶಾಪ್ ಮುಚ್ಚಿಸಲು ಮತ್ತು ಎಲ್ಲ ರೀತಿಯ ಮದ್ಯ ಸಾಗಾಟ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.